Breaking News

ಮುಚ್ಚಿಡಲ್ಪಟ್ಟ ಬಾಬಾಸಾಹೇಬ್ ಅಂಬೇಡ್ಕರ್ ರ ಭವ್ಯ ಇತಿಹಾಸ

Spread the love

ಬಾಬಾಸಾಹೇಬ್ ಡಾ||ಅಂಬೇಡ್ಕರ್ ರವರ ಬಗ್ಗೆ ಈ ದೇಶದ ಜನತೆಗೆ ಏನು ಗೊತ್ತು? ಗೊತ್ತಿರುವುದಿಷ್ಟೆ, ಅಂಬೇಡ್ಕರರು ಯಾರೂ ಮುಟ್ಟಿಸಿಕೊಳ್ಳಲಾಗದ ಒಂದು ಕೀಳು ಜಾತಿಯಲ್ಲಿ ಹುಟ್ಟಿದರು, ಬಾಲ್ಯದಿಂದಲೆ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು, ತಮ್ಮ ತಂದೆಯನ್ನು ನೋಡಲು ಗಾಡಿಯಲ್ಲಿ ಹೋಗುತ್ತಿದ್ದಾಗ ಗಾಡಿಯಿಂದ ತಳ್ಳಲ್ಪಟ್ಟರು… ಹೀಗೆ ಅವಮಾನಕ್ಕೊಳಗಾದ ಅಂಬೇಡ್ಕರರು ಮುಂದೆ ಉನ್ನತ ಜ್ಞಾನ ಪಡೆದು ಈ ದೇಶದ ‘ಸಂವಿಧಾನ ಶಿಲ್ಪಿ’ ಎನಿಸಿಕೊಂಡರು, ಅಸ್ಪೃಶ್ಯರ ಉದ್ಧಾರಕ್ಕಾಗಿ ಹೋರಾಡಿದರು ಎಂಬುದಷ್ಟೆ. ಬಹುಶಃ ಇದಕ್ಕಿಂತ ಹೆಚ್ಚಿಗೆ ಅಂಬೇಡ್ಕರರ ಬಗ್ಗೆ ಈ ದೇಶದ ಜನತೆಗೆ ಗೊತ್ತಿರುವುದು ಸಾಧ್ಯವಿಲ್ಲ ಅಥವಾ ಮೇಲೆ ಹೇಳಿರುವುದೇ ಹೆಚ್ಚಿರಬೇಕು! ದಲಿತರಿಗೆ ಮೀಸಲಾತಿ ತಂದುಕೊಟ್ಟದ್ದಷ್ಟೆ ಅವರ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ತನ್ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಎಂಬ ‘ಮಹಾನ್ ಇತಿಹಾಸವನ್ನು’ ಮುಚ್ಚಿಡಲಾಗುತ್ತಿದೆ.

ಹಾಗಿದ್ದರೆ ಬಾಬಾಸಾಹೇಬ್ ಅಂಬೇಡ್ಕರ್ ರವರ ಸಾಧನೆ ಇದಿಷ್ಟು ಮಾತ್ರವಾ? ಅಥವಾ ಇನ್ನೇನು ಇಲ್ಲವಾ? ಯಾಕೆಂದರೆ 2006ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಅಧ್ಯಕ್ಷ ಜಾರ್ಜ್‍ಬುಷ್ “ಗಾಂಧಿ, ಠಾಗೋರ್ ಮತ್ತು ನೆಹರೂ”ರವರುಗಳನ್ನು ನವಭಾರತದ ನಿರ್ಮಾತೃಗಳೆಂದಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಈ ಪರಿಯಲ್ಲಿ ಇತಿಹಾಸದಲ್ಲಿ ಕುಬ್ಜರನ್ನಾಗಿಸುವ ಅಥವಾ ಮರೆಮಾಚುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವಾಗ ಬುಷ್‍ರಂತಹವರು ಇದಕ್ಕಿಂತ ಹೆಚ್ಚಿಗೆ ಇನ್ನೇನನ್ನು ತಾನೆ ಹೇಳಿಯಾರು? ಈ ಹಿನ್ನೆಲೆಯಲ್ಲಿ ಹೊರ ಜಗತ್ತಿಗೆ ಅಂಬೇಡ್ಕರರರ ನೈಜ ಸಾಧನೆಗಳನ್ನು ಬಿಚ್ಚಿ ಹೇಳಬೇಕಾಗಿದೆ. ಇತಿಹಾಸದಲ್ಲಿ ಅವರನ್ನು ಮರೆಮಾಚಲು ನಡೆಯುತ್ತಿರುವ ದುಷ್ಟ ಪ್ರಯತ್ನವನ್ನು ತಡೆಯಬೇಕಾಗಿದೆ.

ಹಾಗಿದ್ದರೆ ಅಸ್ಪೃಶ್ಯರ ಉದ್ಧಾರವನ್ನು, ಸಂವಿಧಾನ ರಚನೆಯನ್ನು ಹೊರತುಪಡಿಸಿ ಅಂಬೇಡ್ಕರರ ಇನ್ನೇನೇನು ಸಾಧನೆಗಳಿವೆ? ಪಟ್ಟಿ ಮಾಡುತ್ತಾ ಹೋದರೆ ‘ಬಾಬಾಸಾಹೇಬ’ರ ವ್ಯಕ್ತಿತ್ವ ಗಾಂಧಿ ಎಂಬ ‘ಮಹಾತ್ಮ’ರನ್ನೂ , ಠಾಗೋರ್ ಎಂಬ ‘ಗುರುದೇವ’ರನ್ನೂ, ನೆಹರೂ ಎಂಬ ‘ಚಾಚಾ’ರನ್ನೂ ಮೀರಿ ಬೆಳೆಯುತ್ತದೆ. ಏಕೆಂದರೆ ಈ ದೇಶದಲ್ಲಿ ಪ್ರಪ್ರಥಮವಾಗಿ ರೈತರ ಪರ ದನಿ ಎತ್ತಿದ್ದು ಅಂಬೇಡ್ಕರ್. ಈ ದೇಶದ ಮಹಿಳೆಯರಿಗೆ ‘ಹಿಂದೂ ಸಂಹಿತೆ ಮಸೂದೆ’ಯ ಮೂಲಕ ನ್ಯಾಯ ದೊರಕಿಸಿಕೊಡಲು ಹೋರಾಡಿದ್ದು ಅಂಬೇಡ್ಕರ್. ಅಚ್ಚರಿಯ ವಿಷಯವೆಂದರೆ ಈ ದೇಶದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್.ಬಿ.ಐ) ಸ್ಥಾಪಿಸಲು ಕಾರಣರಾದದ್ದು ಕೂಡ ಬಾಬಾಸಾಹೇಬ್ ಅಂಬೇಡ್ಕರರು. ಹಿಂದೂ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಪಾಕಿಸ್ತಾನ ವಿಷಯ, ಕಾರ್ಮಿಕ ನೀತಿ, ವಿದ್ಯುತ್ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೊಜನೆ, ಹಿರಾಕುಡ್ ಯೋಜನೆ, ಸೋನ್ ಕಣಿವೆ ಯೋಜನೆ, ಎರಡನೆ ಮಹಾಯುದ್ಧದ ನಂತರ ದೇಶದ ಆರ್ಥಿಕ ನೀತಿ ಸರಿಪಡಿಸಿದ್ದು… ಅಬ್ಬಬ್ಬಾ ಪಟ್ಟಿ ಮಾಡುತ್ತಾ ಹೋದರೆ ಬಾಬಾಸಾಹೇಬ್ ಅಂಬೇಡ್ಕರರು ಇದಕ್ಕೆಲ್ಲ ಕಾರಣರಾ ಎಂದೆನಿಸುತ್ತದೆ. ವಾಸ್ತವವೆಂದರೆ ಇವು ಅವರ ಮುಚ್ಚಿಟ್ಟ ಇತಿಹಾಸದ ಕೆಲವು ತುಣುಕುಗಳು ಅಷ್ಟೆ!

ಉದಾಹರಣೆಗೆ ಹೇಳುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧದ ನಂತರ ದೇಶದ ಪರಿಸ್ಥಿತಿ ಹದಗೆಟ್ಟಿದ್ದ ಸಂದರ್ಭದಲ್ಲಿ, ದೇಶದ ಕೃಷಿ, ಕೈಗಾರಿಕೆ, ಆರ್ಥಿಕ ಸ್ಥಿತಿ, ಪುನರ್ವಸತಿ ಮತ್ತು ಸೈನಿಕರ ಕಲ್ಯಾಣಕ್ಕಾಗಿ ‘ಪುನರುಜ್ಜೀವನ ಸಮಿತಿ’ ಬ್ರಿಟಿಷ್ ಗವರ್ನರ್ ಜನರಲ್ ರವರಿಂದ ರಚಿಸಲ್ಪಟ್ಟಿತು. ಬಾಬಾಸಾಹೇಬ್ ಅಂಬೇಡ್ಕರ್ ರವರು ಆ ಸಮಿತಿಯ ಸದಸ್ಯರಾಗಿದ್ದರು ಮತ್ತು ಅವರಿಗೆ “ನೀರಾವರಿ ಮತ್ತು ವಿದ್ಯುಚ್ಛಕ್ತಿ ನೀತಿ ನಿರೂಪಣಾ ಸಮಿತಿ’ಯ ಜವಾಬ್ದಾರಿಯನ್ನು ವಹಿಸಲಾಯಿತು. ಆಸಕ್ತಿದಾಯಕ ವಿಷಯವೇನೆಂದರೆ ಆ ಸಮಿತಿಯ ಅಧ್ಯಕ್ಷರಾಗಿ ಬಾಬಾಸಾಹೇಬ್ ಅಂಬೇಡ್ಕರ್ ರವರು ಅದ್ಭುತವಾದ ಸಾಧನೆ ಮಾಡಿದ್ದಾರೆ.

1942 ರಿಂದ 1946 ರವರೆಗೆ ಗವರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕ್ಯಾಬಿನೆಟ್ ಮಂತ್ರಿಯ ಸ್ಥಾನ ಪಡೆದಿದ್ದ ಅವರಿಗೆ ಕಾರ್ಮಿಕ, ನೀರಾವರಿ, ಮತ್ತು ವಿದ್ಯುಚ್ಛಕ್ತಿ ಇಲಾಖೆಗಳನ್ನು ವಹಿಸಲಾಗಿತ್ತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಅಂಬೇಡ್ಕರ್ ರವರು ಮಾಡಿದ ಸಾಧನೆ ಬಹುತೇಕ ಜನರಿಗೆ ಗೊತ್ತಿಲ್ಲ! ಅಥವಾ ಗೊತ್ತಾಗಲು ಬಿಟ್ಟಿಲ್ಲ. ಕುತೂಹಲಕಾರಿ ವಿಷಯವೆಂದರೆ ಈ ಅವಧಿಯಲ್ಲಿಯೇ ಅವರು ಪ್ರಸಿದ್ಧ ದಾಮೋದರ್ ಕಣಿವೆ ಯೋಜನೆ, ಹಿರಾಕುಡ್ ಯೋಜನೆ ಮತ್ತು ಸೋನ್ ಕಣಿವೆ ಯೋಜನೆ ಜಾರಿಗೊಳಿಸಿದ್ದು ಮತ್ತು ಇಂತಹ ಬೃಹತ್ ನಿರಾವರಿ ಯೋಜನೆ, ವಿದ್ಯುತ್ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಅವರು 1944ರಲ್ಲೆ ’ಕೇಂದ್ರೀಯ ಜಲವಿದ್ಯುತ್ ಮತ್ತು ನೀರಾವರಿ ಆಯೋಗ’ವನ್ನು ಸ್ಥಾಪಿಸಿದ್ದು. ಇವತ್ತು ನಮ್ಮ ಮನೆಗಳೇನಾದರೂ ಬೆಳಗುತ್ತಿದ್ದರೆ, ನಮ್ಮ ಹೊಲಗಳೇನಾದರೂ ಹಸಿರಿನಿಂದ ಕಂಗೊಳಿಸುತ್ತಿದ್ದರೆ ಅದು ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್‍ರವರು ಮಾಡಿದ ಅದ್ಭುತ ಸಾಧನೆಯ ಫಲವಲ್ಲದೆ ಬೇರೆನೂ ಅಲ್ಲ. ದುರಂತವೆಂದರೆ ಇಂತಹ ಅದ್ಭುತ ಸಾಧನೆಯನ್ನು ಮುಚ್ಚಿಡಲಾಗಿದೆಯಲ್ಲ ಎಂಬುದು.

ಅಂದಹಾಗೆ ಅಂಬೇಡ್ಕರರ ಮತ್ತೊಂದು ಸಾಧನೆಯನ್ನು ಹೇಳಲೇಬೇಕು. ಅದು ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ)ಗೆ ಸಂಬಂಧಿಸಿದ್ದು. ತಮ್ಮ “ಆರ್ಥಿಕ ಯೋಜನೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಅಂಬೇಡ್ಕರ್ ಪಾತ್ರ” ಎಂಬ ಕೃತಿಯಲ್ಲಿ ಖ್ಯಾತ ಚಿಂತಕ ಸುಖದೇವ್ ಥೋರಟ್‍ರವರು ಇದನ್ನು ದಾಖಲಿಸುತ್ತಾರೆ. “ಆರ್.ಬಿ.ಐ ಸ್ಥಾಪನೆಗೆ ಬ್ರಿಟಿಷ್ ಮಹಾರಾಣಿಯವರಿಂದ ನೇಮಿಸಲ್ಪಟ್ಟಿದ್ದ ‘ಹಿಲ್ಟನ್ ಯಂಗ್ ಆಯೋಗ’ದ ಮುಂದೆ ಅಂಬೇಡ್ಕರ್ ರವರು ಆರ್.ಬಿ.ಐ.ನ ಮಾರ್ಗದರ್ಶಿಸೂತ್ರ, ಕಾರ್ಯಶೈಲಿ ಮತ್ತು ದೂರದೃಷ್ಟಿಯನ್ನು ಮಂಡಿಸುತ್ತಾರೆ. ತನ್ಮೂಲಕ ಆರ್.ಬಿ.ಐ.ನ ಸ್ಥಾಪನೆಗೆ ಕಾರಣರಾಗುತ್ತಾರೆ” ಎನ್ನುತ್ತಾರೆ ಸುಖದೆವ್ ಥೊರಟ್. ಕುತೂಹಲಕಾರಿ ಅಂಶವೆಂದರೆ ‘ಹಿಲ್ಟನ್ ಯಂಗ್ ಅಯೋಗ’ದ ಪ್ರತಿಯೊಬ್ಬ ಸದಸ್ಯನ ಕೈಯಲ್ಲೂ ಬಾಬಾಸಾಹೇಬ್ ಅಂಬೇಡ್ಕರ್ ರವರು 1925 ರಲ್ಲಿ ‘ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ಗಾಗಿ ‘ಡಿ.ಎಸ್‍ಸಿ’ ಪದವಿ ಪಡೆಯಲು ರಚಿಸಿದ್ದ ‘ರೂಪಾಯಿಯ ಸಮಸ್ಯೆ: ಅದರ ಮೂಲ ಮತ್ತು ಪರಿಹಾರ’ ಎಂಬ ಕೃತಿಯಿತ್ತು. ದೇಶದ ಹಣಕಾಸು ವ್ಯವಸ್ಥೆ ಪಟ್ಟಭದ್ರರ ಕೈಗೆ ಜಾರುತ್ತಿದ್ದನ್ನು ಗಮನಿಸಿ ಅಂಬೇಡ್ಕರ್ ರವರು ಆರ್.ಬಿ.ಐ.ನ ಅಗತ್ಯತೆ ಮತ್ತು ಅದರ ಭವಿಷ್ಯದ ಮಾರ್ಗಸೂಚಿಯ ಬಗ್ಗೆ ಆಯೋಗದ ಮುಂದೆ ಸಮಗ್ರವಾದ ವಾದ ಮಂಡಿಸುತ್ತಾರೆ ತನ್ಮೂಲಕ 1935 ಏಪ್ರಿಲ್ 1 ರಂದು ಅದರ ಸ್ಥಾಪನೆಗೆ ಕಾರಣರಾಗುತ್ತಾರೆ. ಮತ್ತೆ ಕೇಳುತ್ತಿರುವ ಪ್ರಶ್ನೆಯೇನೆಂದರೆ ಇಂತಹ ಅದ್ಭುತ ಇತಿಹಾಸ ಎಷ್ಟು ಜನರಿಗೆ ಗೊತ್ತು ಎಂಬುದು?

ಮತ್ತೋಂದು ವಿಷಯ ಇಲ್ಲಿ ಹೇಳಲೆಬೇಕಾಗಿದೆ. ಕೆಲ ವರ್ಷಗಳ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿ ಐ) ತನ್ನ 150ನೇ ವರ್ಷಾಚರಣೆಯನ್ನು ನೆರವೇರಿಸಿಕೊಂಡಿತು. ಅದು ರಾಷ್ಟ್ರಗೀತೆಯ ಕರ್ತೃ ರವೀಂದ್ರನಾಥ್ ಠಾಗೋರ್ ರವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಿತು. ಪ್ರಶ್ನೆಯೇನೆಂದರೆ ಈ ದೇಶದ ಕರೆನ್ಸಿಯ ಬಗ್ಗೆ, ಹಣಕಾಸು, ಅರ್ಥಶಾಸ್ತ್ರದ ಬಗ್ಗೆ ಠಾಗೋರ್ ರವರ ಕೊಡುಗೆ ಏನು? ಎಂಬುದು. ಖಂಡಿತ ಏನೂ ಇಲ್ಲ. ಎಸ್.ಬಿ.ಐ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣಕರ್ತರಾದ, ಹಣಕಾಸು ಮತ್ತು ಆರ್ಥಿಕತೆ ಕುರಿತು ಹಲವಾರು ಕೃತಿಗಳನ್ನು ರಚಿಸಿ ಈ ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಭುತ ಕೊಡುಗೆ ನೀಡಿರುವ, ನೊಬೆಲ್ ಪ್ರಶಸ್ತಿ ವಿಜೇತ ಖ್ಯಾತ ಅರ್ಥಶಾಸ್ತ್ರಜ್ಞ ಅಮಾತ್ರ್ಯ ಸೇನ್‍ರಿಂದ “ಅಂಬೇಡ್ಕರ್ ನನ್ನ ಅರ್ಥಶಾಸ್ತ್ರದ ಗುರು” ಎಂದು ಕರೆಸಿಕೊಂಡಿರುವ ಬಾಬಾಸಾಹೇಬ್ ಡಾ||ಅಂಬೇಡ್ಕರ್ ರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಎಂದು ಬಿಂಬಿಸಬೇಕಿತ್ತು! ದುರಂತವೆಂದರೆ ಅಸ್ಪೃಶ್ಯತೆಯ ಸೋಂಕು ತಗುಲಿಸಿಕೊಂಡ ಈ ದೇಶದ ಸ್ಥಾಪಿತ ಹಿತಾಸಕ್ತಿಗಳಿಗೆ ಅಂಬೇಡ್ಕರರ ಈ ಸಾಧನೆಗಳು ಕಾಣುತ್ತಿಲ್ಲ. ಇನ್ನು ಅವರು ಬ್ರಾಂಡ್ ಅಂಬಾಸಿಡರ್ ಆಗಲು ಹೇಗೆ ಸಾಧ್ಯ? ಅವರನ್ನು ಕೇವಲ ಒಂದು ಸಮುದಾಯದ ‘ಬ್ರಾಂಡ್’ ಆಗಿ ಬಿಂಬಿಸಲಾಗುತ್ತಿದೆ ಅಷ್ಟೇ!

ಇನ್ನು ಈ ನಡುವೆ ಅಂತರ್ ರಾಜ್ಯ ಸಮಸ್ಯೆಗಳ ಬಗ್ಗೆ ಅಂಬೇಡ್ಕರ್ ರವರ ಅನಿಸಿಕೆಗಳನ್ನು ದಾಖಲಿಸಲೇಬೇಕು. ಯಾಕೆಂದರೆ 1955ರಲ್ಲೆ ಅಂಬೇಡ್ಕರ್ ರವರು ತಮ್ಮ “ಭಾಷಾವಾರು ಪ್ರಾಂತ್ಯಗಳ ಬಗೆಗಿನ ಆಲೋಚನೆಗಳು’ ಎಂಬ ಕೃತಿಯಲ್ಲಿ ಮಧ್ಯಪ್ರದೇಶವನ್ನು ಉತ್ತರ ಮತ್ತು ದಕ್ಷಿಣ ರಾಜ್ಯಗಳಾಗಿ ವಿಂಗಡಿಸಲು ಮತ್ತು ಬಿಹಾರವನ್ನು ಎರಡು ರಾಜ್ಯವಾಗಿ ವಿಂಗಡಿಸಲು ಸಲಹೆ ನೀಡುತ್ತಾರೆ. ಅಚ್ಚರಿಯ ವಿಷಯವೇನೆಂದರೆ ಅವರು ಸಲಹೆ ನೀಡಿದ 45 ವರ್ಷಗಳ ನಂತರ ಅದು ಜಾರಿಯಾದದ್ದು. ಯಾಕೆಂದರೆ 2000ದಲ್ಲಿ ಮದ್ಯಪ್ರದೇಶದಿಂದ ಛತ್ತೀಸಗಢ ಮತ್ತು ಬಿಹಾರದಿಂದ ಜಾರ್ಖಂಡ್‍ಅನ್ನು ವಿಭಜನೆಗೊಳಿಸಿ ಪ್ರತ್ಯೇಕ ರಾಜ್ಯಗಳೆಂದು ಘೋಷಿಸಲಾಯಿತು. ತನ್ಮೂಲಕ ಬಾಬಾಸಾಹೇಬ್
ಅಂಬೇದ್ಕರರ ದೂರದೃಷ್ಟಿಗೆ ಮನ್ನಣೆ ನೀಡಲಾಯಿತು. (ಅಂದಹಾಗೆ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಇರುವ ಹೊಗೇನಕಲ್ ವಿವಾದಕ್ಕು ಬಾಬಾಸಾಹೇಬ್ ಅಂಬೇಡ್ಕರರಲ್ಲಿ ಪರಿಹಾರವಿದೆಯೆಂದರೆ ಅತಿಶಯೋಕ್ತಿಯೆನಿಸದು. ಅದಕ್ಕಾಗಿ ಅಂಬೇಡ್ಕರ್ ಕೃತಿಗಳ ಮೋರೆ ಹೋಗಬೇಕಷ್ಟೆ.)

ಸಿಂಪಲ್ಲಾಗಿ ಹೇಳುವುದಾದರೆ ಡಾ.ಅಂಬೇಡ್ಕರರನ್ನು ಕೇವಲ ದಲಿತರ ಉದ್ಧಾರಕ ಎಂದು ಮಾತ್ರ ನೋಡಲಾಗಿದೆ. ತನ್ಮೂಲಕ ಅವರ ಇತರ ಅದ್ಭುತ ಸಾಧನೆಗಳನ್ನು ನಿಕೃಷ್ಟವಾಗಿ ಮುಚ್ಚಿಡಲಾಗಿದೆ. ಅಂತಹ ಮುಚ್ಚಿಡುವ ಪ್ರಕ್ರಿಯೆ ಈಗಲೂ ನಡೆಯುತ್ತಿದೆ ಎಂದರೆ ಅಚ್ಚರಿಯಾಗಬಹುದು. ಉದಾಹರಣೆಗೆ ಪಠ್ಯ ಪುಸ್ತಕವೊಂದರಲ್ಲಿ ಸಂವಿಧಾನ ರಚನೆ ಬಗೆಗಿನ ಅಧ್ಯಾಯದಲ್ಲಿ ಡಾ||ಬಾಬು ರಾಜೇಂದ್ರ ಪ್ರಸಾದರನ್ನು ಸಂವಿಧಾನ ರಚನಾಸಭೆಯ ಅಧ್ಯಕ್ಷರೆಂದೂ (ನೆನಪಿರಲಿ Constituent Assembly
ಎಂಬುದನ್ನು ‘ಸಂವಿಧಾನ ಸಭೆ’ ಎಂದು ಅನುವಾದಿಸಬೇಕಿತ್ತು. ಆದರೆ ಗೊಂದಲ ಮೂಡಿಸಲು ಅದನ್ನು ‘ಸಂವಿಧಾನ ರಚನಾಸಭೆ’ ಎಂದು ಉದ್ದೇಶಪೂರ್ವಕವಾಗಿ ತಪ್ಪಾಗಿ ಅನುವಾದಿಸಲಾಗಿದೆ ಎಂದೆನಿಸುತ್ತದೆ!) ಮತ್ತು ಡಾ||ಅಂಬೇಡ್ಕರರನ್ನು ಕರಡು ಸಮಿತಿಯ (ಇದನ್ನು ಸರಿಯಾಗಿ ಅನುವಾದಿಸಲಾಗಿದೆ!) ಅಧ್ಯಕ್ಷರೆಂದು ಉಲ್ಲೇಖಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಇಲ್ಲಿ ಕೇವಲ ರಾಜೇಂದ್ರ ಪ್ರಸಾದರ ಚಿತ್ರವನ್ನು ಮಾತ್ರ ಮುದ್ರಿಸಲಾಗಿದೆ, ಅಂಬೇಡ್ಕರ್ ಭಾವಚಿತ್ರ ಇಲ್ಲ! ರಾಜೇಂದ್ರಪ್ರಸಾದರ ಆ ಚಿತ್ರವನ್ನು ನೋಡಿದ ಯಾರಾದರೂ ಅಂಬೇಡ್ಕರರನ್ನು “ಸಂವಿಧಾನ ಶಿಲ್ಪಿ” ಎನ್ನುತ್ತಾರೆಯೆ? ಖಂಡಿತ ಇಲ್ಲ. ‘ಬಾಬು ರಾಜೇಂದ್ರ ಪ್ರಸಾದರ ಚಿತ್ರದ ಹಿಂದೆ’ ಅಂಬೇಡ್ಕರರನ್ನು “ಮುಚ್ಚುವ” ಕ್ರೂರ ಪ್ರಯತ್ನವಿದಲ್ಲದೆ ಬೇರೆನೂ ಅಲ್ಲ! ಹಾಗಿದ್ದರೆ ಅಂಬೇಡ್ಕರ್ ರನ್ನು ಹೀಗೆ ಮುಚ್ಚಿಡುವ, ಅವರ ಸಾಧನೆಗಳೆಲ್ಲವನ್ನು ಇಡೀ ಜಗತ್ತಿಗೆ ಹೇಳದಿರುವುದರ ಹಿಂದಿರುವ ಹುನ್ನಾರವಾದರೂ ಏನು? ಖಂಡಿತ, ಇತಿಹಾಸ ಹೇಳುವ ದಾಖಲಿಸುವ ಪ್ರಕ್ರಿಯೆ ಯಲ್ಲು ಅಸ್ಪೃಶ್ಯತೆ ಆಚರಿಸುವ ಆ ಮೂಲಕ ಬಾಬಾಸಾಹೇಬ್ ಅಂಬೇಡ್ಕರರ ಭವ್ಯ ಇತಿಹಾಸವನ್ನು ಜನರಿಂದ ಮರೆಮಾಚಿ ಅವರ ಸಾಧನೆಗಳು ಜನಸಾಮಾನ್ಯರಿಗೆ ತಲುಪಬಾರದು, ಆ ಮೂಲಕ ಬಾಬಾಸಾಹೇಬರ ವ್ಯಕ್ತಿತ್ವವನ್ನು ಕುಬ್ಜಗೊಳಿಸುವ ವ್ಯವಸ್ಥಿತ ಸಂಚಿದು.

ಖಂಡಿತ, ಇದು ದುರಂತ. ಇಂತಹ ದುರಂತದ ಸಂಚಿಗೆ ಬಾಬಾಸಾಹೇಬ್ ಅಂಬೇಡ್ಕರರ ಅಮೋಘ ವ್ಯಕ್ತಿತ್ವ ಬಲಿಯಾಗಬಾರದು. ಹಾಗೆಯೇ ಬಾಬಾಸಾಹೇಬರ ಅಂತಹ ಶ್ರೇಷ್ಠ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಭವಿಷ್ಯದ ದಿನಗಳಲ್ಲಿ ಅಕಸ್ಮಾತ್ ಅರಿಯುವ ಮುಂದಿನ ಪೀಳಿಗೆ “ನಮಗೇಕೆ ಇದನ್ನು ಯಾರೂ ಹೇಳಲಿಲ್ಲ” ಕೇಳುವಂತಾಗಬಾರದು. ಆದಕಾರಣ ಪ್ರಜ್ಞಾವಂತ ಪ್ರತಿಯೊಬ್ಬ ಭಾರತೀಯ ನಾಗರಿಕನು ಎಚ್ಚೆತ್ತುಕೊಳ್ಳಬೇಕಿದೆ. ಬಾಬಾಸಾಹೇಬ್ ಅಂಬೇಡ್ಕರರ ಭವ್ಯ ಇತಿಹಾಸವನ್ನು, ಸಾಧನೆಗಳನ್ನು ಇಡೀ ಜಗತ್ತಿಗೆ ಸಾರಿಹೇಳಲು ಟೊಂಕಕಟ್ಟಿ ನಿಲ್ಲಬೇಕಿದೆ.

CONTAICREDITS TO*ರಘೋತ್ತಮ ಹೊ.ಬ
#ಅಂಬೇಡ್ಕರ್ #ಅಂಬೇಡ್ಕರ್_ಜಯಂತಿ #AmbedkarJayanti #ambedkar #AmbedkarJayanti2023 #ambedkarism #ಭಾರತ #ಭಾರತೀಯರು #ಇತಿಹಾಸ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ