ಬೆಳಗಾವಿ : ಚುನಾವಣಾ ಆಯೋಗವು ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಇನ್ನೂ ಅವಕಾಶವಿದ್ದು, ಏಪ್ರಿಲ್ 10 ರವರೆಗೂ ಹೆಸರು ಸೇರ್ಪಡೆ ಮಾಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಮಾ.29) ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೆ ಅನೇಕ ರೀತಿಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಅದೇ ರೀತಿ ವಿಕಲಚೇತನರ ಸೇರ್ಪಡೆಗೂ ಕ್ರಮ ಕೈಗೊಳ್ಳಲಾಗಿದೆ.
ಈ ಬಾರಿ ವಿಕಲಚೇತನರು ಮತ್ತು 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಮತ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲ ರಾಜಕೀಯ ಪಕ್ಷಗಳು ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಪರವಾನಿಗೆ ಪಡೆಯದೇ ಯಾವುದೇ ರೀತಿಯ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆಸುವಂತಿಲ್ಲ. ಪೋಸ್ಟರ್, ಬ್ಯಾನರ್ ಅಳವಡಿಸಲು ಹಾಗೂ ಗೋಡೆಬರಹಕ್ಕೆ ಅವಕಾಶವಿರುವುದಿಲ್ಲ.
ಪ್ರಚಾರ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು.
ವಿವಿಧ ರೀತಿಯ ಪರವಾನಿಗೆ ನೀಡಲು ಏಕ ಗವಾಕ್ಷಿ ವ್ಯವಸ್ಥೆ ಮಾಡಲಾಗುವುದು.
ಇಡೀ ಜಿಲ್ಲೆಯ ಹದಿನೆಂಟು ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಂದೇ ಪರವಾನಿಗೆ ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ನಿಗದಿತ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರವಾನಿಗೆ ಅಗತ್ಯವಿದ್ದರೆ ಆಯಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಮಾತನಾಡಿ, ಪ್ರತಿಯೊಂದು ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಇರುತ್ತದೆ. ಇನ್ನೊಬ್ಬರಿಗೆ ಅಥವಾ ಇನ್ನೊಂದು ಪಕ್ಷದ ಪ್ರಚಾರಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಾಂತಿಯುತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು. ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರವಾನಿಗೆ ಇಲ್ಲದೇ ಪ್ರಚಾರ ಕೈಗೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಪಾಟೀಲ ತಿಳಿಸಿದರು.
ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಮತದಾರರಿಗೆ ಆಮಿಷವೊಡ್ಡುವುದು ಅಥವಾ ಬೆದರಿಸುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.