ಬೆಳಗಾವಿ: ಜಿಲ್ಲೆಯಲ್ಲಿ 18 ವಿಧಾನಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ಮರಾಠಿ ಮತದಾರರೇ ನಿರ್ಣಾಯಕ. ಹೀಗಾಗಿ, ಮರಾಠಿ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತುಗಳು ನಡೆದಿವೆ.
ಕೆಲವೇ ವರ್ಷಗಳ ಹಿಂದೆ 4ರಿಂದ 6 ಶಾಸಕರನ್ನು ಹೊಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಈಗ ದೂಳೀಪಟವಾಗಿದೆ.
ಆ ಎಲ್ಲ ಮತಗಳನ್ನು ಸೆಳೆಯಲು ರಾಜಕೀಯ ಪಕ್ಷಗಳು, ಟಿಕೆಟ್ ಆಕಾಂಕ್ಷಿಗಳೂ ಓಲೈಕೆ ಆರಂಭಿಸಿದ್ದಾರೆ. ಶಿವಾಜಿ ಮೂರ್ತಿ ಪ್ರತಿಷ್ಠಾಪನೆ, ಮರಾಠಿ ಸಾಹಿತ್ಯ ಸಮ್ಮೇಳನ, ಮರಾಠಿಗರೇ ಹೆಚ್ಚಿರುವ ಹಳ್ಳಿಗಳಲ್ಲಿ ಭೂಮಿಪೂಜೆ, ಮಹಾರಾಷ್ಟ್ರ ಕ್ಷೇತ್ರದರ್ಶನ… ಹೀಗೆ ಎಲ್ಲ ಅವಕಾಶಗಳನ್ನೂ ಬಾಚಿಕೊಳ್ಳುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಕೋಟೆಯಲ್ಲಿ 50 ಅಡಿ ಎತ್ತರದ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಕೂಡ ಓಲೈಕೆಯ ಭಾಗ. ಶಾಸಕರಾದ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ನಡುವೆ ವಾಕ್ಸಮರ ದಿನವೂ ಸಾಗಿದೆ. ಬಿಜೆಪಿ- ಕಾಂಗ್ರೆಸ್ ನಾಯಕರೂ ಇದರ ‘ಕ್ರೆಡಿಟ್’ಗಾಗಿ ಪೈಪೋಟಿ ನಡೆಸಿದ್ದಾರೆ.
ಮಾರ್ಚ್ 4, 5ರಂದು ಮೂರ್ತಿ ಲೋಕಾರ್ಪಣೆಗೆ ಲಕ್ಷ್ಮಿ ಹೆಬ್ಬಾಳಕರ ಸಿದ್ಧತೆ ನಡೆಸಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವಾಜಿ ಮಹಾರಾಜರ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ಮಹಾರಾಷ್ಟ್ರದ ಸಂಸದರು, ಶಾಸಕರು, ಮರಾಠಿ ನಾಟಕ ಹಾಗೂ ಸಿನಿಮಾ ನಟರನ್ನೂ ಆಹ್ವಾನಿಸಿದ್ದಾರೆ.
ಬೆಳಗಾವಿ ಉತ್ತರದ ಶಾಸಕ ಅನಿಲ್ ಬೆನಕೆ ಸಂಭಾಜಿ ಚೌಕ್‌ನಲ್ಲಿ ಛತ್ರಪತಿ ಸಂಭಾಜಿ ಮೂರ್ತಿ, ಕೋಟೆ ಮಾದರಿ ನಿರ್ಮಿಸಿದ್ದಾರೆ. ಇದರ ಉದ್ಘಾಟನೆಗೆ ಬಂದಿದ್ದ ಗ್ವಾಲಿಯರ್ ರಾಜವಂಶಸ್ಥ ಮಾಹುರ್ಕರ್ ಅವರ ಮೆರವಣಿಗೆ ಮರಾಠಿಗರಲ್ಲಿ ಒಗ್ಗಟ್ಟು ಮೂಡಿಸಿತ್ತು.
ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಕೂಡ ಶಿವಾಜಿ ಚರಿತ್ರೆ ಬಿಂಬಿಸುವ ‘ಶಿವಚರಿತ್ರಾ’ ಎಂಬ ಪ್ರತಿಮೆಗಳ ಲೋಕ ಸಿದ್ಧಪಡಿಸಿದ್ದಾರೆ. ಶಿವಾಜಿ ಉದ್ಯಾನದಲ್ಲೇ ಇದರ ಉದ್ಘಾಟನೆಗೆ ಸಿದ್ಧತೆ ನಡೆದಿದೆ. ಮರಾಠರ ಪರಂಪರೆ, ಸಂಸ್ಕೃತಿ, ಶೌರ್ಯ ಬಿಂಬಿಸುವ ಈ ಪ್ರತಿಮೆಗಳಿಗೆ ಧ್ವನಿ- ಬೆಳಕಿನ ವ್ಯವಸ್ಥೆಯೂ ಇದೆ.
ಖಾನಾಪುರ ಕ್ಷೇತ್ರದಲ್ಲಂತೂ ನಾಲ್ಕು ತಿಂಗಳ ಹಿಂದಿನಿಂದಲೇ ಮತದಾರರಿಗೆ ದುಂಬಾಲು ಬಿದ್ದಿದ್ದಾರೆ. ಸವದತ್ತಿಯ ಯಲ್ಲಮ್ಮ, ಕೊಲ್ಹಾಪುರದ ಲಕ್ಷ್ಮಿ, ಜ್ಯೋತಿಬಾ, ಪಂಢರಪುರ ಜಾತ್ರೆಗಳಿಗೆ ಜನರನ್ನು ರಾಜಕಾರಣಿಗಳೇ ಕಳುಹಿಸುತ್ತಿದ್ದಾರೆ. ಊಟ, ವಸತಿ, ವಾಹನಗಳ ವ್ಯವಸ್ಥೆ ಕೂಡ ಮಾಡುತ್ತಿದ್ದಾರೆ. ಅಲ್ಲಿಂದ ತಂದ ಪ್ರಸಾದವನ್ನು ಮನೆಮನೆಗೂ ಹಂಚುತ್ತಿದ್ದಾರೆ. ಶಾಸಕಿ ಡಾ.ಅಂಜಲಿ ನಿಂಬಾಳಕರ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸೋನಾಲಿ ಸರ್ನೋಬತ್ ಕೂಡ ಇದಕ್ಕೆ ಹೊರತಾಗಿಲ್ಲ.
ಸತೀಶ ಜಾರಕಿಹೊಳಿ, ಜೊಲ್ಲೆ ಕಸರತ್ತು:
‘ಸಂಭಾಜಿ ಮಹಾರಾಜರ ಚರಿತ್ರೆ ಬಗ್ಗೆ ಅಪಸ್ವರ ಎತ್ತಿದ್ದಾರೆ’ ಎಂಬ ಆರೋಪದಿಂದ ಮುಕ್ತರಾಗಲು ಶಾಸಕ ಸತೀಶ ಜಾರಕಿಹೊಳಿ ಯಮಕನಮರಡಿ ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮಹಾರಾಷ್ಟ್ರದ ನಾಯಕರನ್ನು ಕರೆಯಿಸಿ ಸಮಾವೇಶ ಮಾಡಿಸಿ, ತಾವು ಮರಾಠಿಗರ ವಿರೋಧಿ ಅಲ್ಲ ಎಂಬುದಾಗಿ ಬಿಂಬಿಸಲು ಮುಂದಾಗಿದ್ದಾರೆ.
ನಿಪ್ಪಾಣಿಯಲ್ಲಿ ಶೇ 90ರಷ್ಟು ಮರಾಠಿ ಭಾಷಿಕರಿದ್ದಾರೆ. ಮತದಾರರ ಸಂಖ್ಯೆಯೂ ಹೆಚ್ಚು. ಈ ಕ್ಷೇತ್ರ ಪ್ರತಿನಿಧಿಸುವ ಸಚಿವೆ ಶಶಿಕಲಾ ಜೊಲ್ಲೆ ‘ಶಿವಗರ್ಜನಾ’, ‘ವೀರರಾಣಿ ಚನ್ನಮ್ಮ’ ಮೊದಲಾದ ಮಹಾನಾಟಕಗಳ ಪ್ರದರ್ಶನ, ಗಡಿ ಭಾಗದ ಮರಾಠಿಗರಿಗಾಗಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿದ್ದಾರೆ. ಉಮೇಶ ಕತ್ತಿ ಪ್ರತಿನಿಧಿಸುತ್ತಿದ್ದ ಹುಕ್ಕೇರಿ ಕ್ಷೇತ್ರದ ಸಂಕೇಶ್ವರ ಪಟ್ಟಣ ಹಾಗೂ ವಿವಿಧ ಹಳ್ಳಿಗಳಲ್ಲೂ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ಜೋರಾಗಿ
ನಡೆದಿದೆ.
*
ಮರಾಠಿಗರಿಗೆ ರಕ್ಷೆ, ಕನ್ನಡಿಗರಿಗೆ ಶಿಕ್ಷೆ
ಈಚೆಗಷ್ಟೇ ಉತ್ತರ ಹಾಗೂ ದಕ್ಷಿಣ ಕ್ಷೇತ್ರದ ಶಾಸಕರೇ ಮುಂದೆ ನಿಂತು ಬೆಳಗಾವಿ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳನ್ನು ಮರಾಠಿಗರಿಗೆ ನೀಡಿದರು. ಅರ್ಹತೆ ಇದ್ದರೂ ಕನ್ನಡಿಗರನ್ನು ದೂರ ಸರಿಸಿದರು.
ಸಾಲದೆಂಬಂತೆ, 2021ರಲ್ಲಿ ಎಂಇಎಸ್ ಮುಖಂಡರ ವಿರುದ್ಧ ಹೋರಾಡಿದ ಇಬ್ಬರು ಕನ್ನಡ ಕಾರ್ಯಕರ್ತರ ವಿರುದ್ಧ ಈಗ ರೌಡಿಶೀಟರ್ ಪ್ರಕರಣ ದಾಖಲಿಸಲಾಗಿದೆ. ಮರಾಠಿ ಮತದಾರರ ಓಲೈಕೆಗೆ ಹೀಗೆ ಮಾಡಿದ್ದಾರೆ ಎನ್ನುವುದು ಹೋರಾಟಗಾರರ ದೂರು.
2022ರ ನವೆಂಬರ್ 1ರಂದು ನಡೆದ ರಾಜ್ಯೋತ್ಸವ ಮೆರವಣಿಗೆಯಲ್ಲಿ ಯಾವೊಬ್ಬ ಶಾಸಕರೂ ಭಾಗವಹಿಸಲಿಲ್ಲ. ಮರಾಠಿ ಮತದಾರರ ಕೆಂಗಣ್ಣಿಗೆ ಗುರಿಯಾಗುತ್ತೇವೆ ಎಂಬ ಭಯ ರಾಜಕಾರಣಿಗಳನ್ನು ಕಾಡಿತು. ಎಲ್ಲೆಂದರಲ್ಲಿ ಈಗ ಶಿವಾಜಿ ಮೂರ್ತಿಯದ್ದೇ ಸದ್ದು. ಆದರೆ, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣರ ಮಾತೂ ಎತ್ತುತ್ತಿಲ್ಲ ಎಂಬ ಅಸಮಾಧಾನ ಕನ್ನಡಿಗರದ್ದು.
2008ರಲ್ಲಿ ಹಿರೇಬಾಗೇವಾಡಿ ಬಳಿ, ರಾಷ್ಟ್ರೀಯ ಹೆದ್ದಾರಿ ಪಕ್ಕ ಬಸವಣ್ಣನ ಮೂರ್ತಿ ತಂದು ನಿಲ್ಲಿಸಲಾಗಿದೆ. 15 ವರ್ಷ ಕಳೆದರೂ ಲೋಕಾರ್ಪಣೆ ಮಾಡಿಲ್ಲ. ಆಗ ಗ್ರಾಮೀಣ ಶಾಸಕರಾಗಿದ್ದ ಅಭಯ ಪಾಟೀಲ ಅವರು ಮೂರ್ತಿ ಪ್ರತಿಷ್ಠಾಪಿಸಿದರು. ನಂತರ ಸಂಜಯ ಪಾಟೀಲ ಎರಡು ಅವಧಿಗೆ ಶಾಸಕರಾದರು. ಸದ್ಯ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಕ್ಷೇತ್ರದಲ್ಲೇ ಈ ಊರು ಬರುತ್ತದೆ.
ಶಿವಾಜಿ ಮೂರ್ತಿಗೆ ತೋರುವ ಆಸಕ್ತಿಯನ್ನು ಬಸವಣ್ಣನ ಮೂರ್ತಿಗೆ ಯಾರೂ ತೋರುತ್ತಿಲ್ಲ ಎಂಬುದು ಕನ್ನಡಿಗರ ಕೊರಗು.