ಐದು ದಿನಗಳ ಕಾಲ ಶ್ರದ್ಧಾಭಕ್ತಿ-ಸಡಗರದಿಂದ ಆಚರಿಸುವ ಹಬ್ಬ ದೀಪಾವಳಿ. ಇದರಲ್ಲಿ ಬಲಿಪಾಡ್ಯವನ್ನು ಈ ಬಾರಿ ಅ. 26ರಂದು ಆಚರಿಸಲಾಗುತ್ತದೆ.
ವಾಮನನು ತ್ರಿವಿಕ್ರಮರೂಪಿಯಾಗಿ ಬಲಿಚಕ್ರವರ್ತಿಯನ್ನು ಸುತಲಲೋಕಕ್ಕೆ ಕಳುಹಿಸಿದ ದಿನವೇ ಬಲಿಪ್ರತಿಪತ್.
ಮಹಾಧಾರ್ವಿುಕನಾದ ಬಲಿಮಹಾರಾಜನಿಗೂ ತಾನು ಎಲ್ಲವನ್ನು ಗೆದ್ದ ಮಹಾಚಕ್ರವರ್ತಿ ಎಂಬ ಅಹಂಕಾರ ಬಂದಿತು. ಆ ಅಹಂಕಾರವನ್ನು ನಾಶಗೊಳಿಸಬೇಕೆಂದೇ ನಾರಾಯಣನು ವಾಮನರೂಪಿಯಾಗಿ ಬಂದು ಮೂರು ಪಾದ ಭೂಮಿಯನ್ನು ದಾನವಾಗಿ ಕೇಳಿದನು. ಸರ್ವಸ್ವವೂ ನನ್ನಾಧೀನದಲ್ಲಿರುವಾಗ ಬೇಕಾದ್ದನ್ನು ಕೊಡುವೆ ಎಂಬ ಅಹಂಕಾರದಿಂದ ಬಲಿಯು ಹೇಳುತ್ತಾನೆ. ಅದಕ್ಕೆ ವಾಮನನು ಒಂದು ಪಾದದಿಂದ ಭೂಲೋಕ, ಇನ್ನೊಂದು ಪಾದದಿಂದ ಸಮಸ್ತ ಆಕಾಶವನ್ನೇ ಅಳೆದ. ಇನ್ನು ಮೂರನೆಯ ಪಾದಕ್ಕೆ ಅವಕಾಶವೇ ಇಲ್ಲದಂತಾಯಿತು. ಆಗ ಬಲಿಚಕ್ರವರ್ತಿ ತನ್ನನ್ನೇ ತಾನು ದೇವರಿಗೆ ಸಮರ್ಪಿಸಿ ತನ್ನ ಶಿರದ ಮೇಲೆಯೇ ಮೂರನೇ ಪಾದವನ್ನು ಇಡಲು ಪ್ರಾರ್ಥಿಸಿದ. ಹೀಗೆ ವಾಮನನು ವಿರಾಟ್ ತ್ರಿವಿಕ್ರಮನಾಗಿ ಬಲಿಯ ಶಿರದ ಮೇಲೆ ಪಾದವನ್ನಿಟ್ಟು ಅವನನ್ನು ಸುತಲಲೋಕಕ್ಕೆ ಕಳುಹಿದ. ಇತಿಹಾಸದಲ್ಲೇ ಯಾರೂ ಕೊಡದಂತೆ ದಾನವನ್ನು ಕೊಟ್ಟ ಬಲಿಚಕ್ರವರ್ತಿಗೆ ‘ಕಾರ್ತಿಕ ಶುದ್ಧ ಪ್ರತಿಪತ್ ದಿನವು ನಿನ್ನ ಹೆಸರಿನಿಂದಲೇ ಪ್ರಸಿದ್ಧವಾಗಲಿ’ ಎಂದು ವಾಮನನು ವರ ನೀಡಿ ಅನುಗ್ರಹಿಸಿದ. ಆದ್ದರಿಂದಲೇ ಈ ದಿನವನ್ನು ಬಲಿಪ್ರತಿಪದಾ ಅಥವಾ ಬಲಿಪಾಡ್ಯಮೀ ಎಂದು ಕರೆಯುತ್ತಾರೆ.
‘ಈ ದಿನದಂದು ಯಾರು ದೀಪವನ್ನು ಬೆಳಗಿಸಿ ದೀಪದಾನವನ್ನು ಮಾಡುತ್ತಾರೆಯೋ ಅವರಲ್ಲಿ ಶ್ರೀಮಹಾಲಕ್ಷ್ಮಿಯು ಸ್ಥಿರವಾಗಿ ನೆಲೆಸುವಂತಾಗಲಿ’ ಎಂದು ಬಲಚಕ್ರವರ್ತಿಯೂ ವಾಮನನಲ್ಲಿ ವರವನ್ನು ಬೇಡಿದನು. ಅಹಂಕಾರದಿಂದ ಬೀಗುವ ಮನುಷ್ಯರಿಗೆ, ಸರ್ವಸ್ವವೂ ದೇವರ ಅಧೀನವೇ ಎಂದು ತೋರಿಸುವ ಸಾಂಕೇತಿಕ ಅರ್ಥವೇ ಈ ಬಲಿಪಾಡ್ಯದ ಆಚರಣೆ. ಬಲಿಪಾಡ್ಯಮಿಯಂದು ಅವಶ್ಯವಾಗಿ ಎಲ್ಲರೂ ತೈಲಾಭ್ಯಂಜನ ಮಾಡಲೇಬೇಕು.
ವಿಜಯದಶಮಿಯಂದು ರಾವಣನನ್ನು ಸಂಹರಿಸಿ ಶ್ರೀರಾಮಚಂದ್ರನು ಸೀತಾಸಮೇತನಾಗಿ ಮತ್ತು ಹನುಮಂತನೊಡನೆ ಅಯೋಧ್ಯೆಗೆ ಮರಳಿದ ಸುದಿನವೇ ಈ ಪಾಡ್ಯ. ವನವಾಸವನ್ನು ಮುಗಿಸಿ ಮಹಾನವಮಿಯಂದು ಶಮೀವೃಕ್ಷದಿಂದ ಆಯುಧಗಳನ್ನಿಳಿಸಿ ಪೂಜಿಸಿ, ವಿಜಯದಶಮೀಯಂದು ವಿರಾಟ ರಾಜನ ಗೋವುಗಳನ್ನು ಕದ್ದ ದುರ್ಯೋಧನಾದಿಗಳನ್ನು ಪಾಂಡವರು ಸೋಲಿಸಿದರು. ನಂತರ ಪಾಂಡವರು ಹಸ್ತಿನಾಪುರಕ್ಕೆ ಮರಳಿದ ಸಂತಸದ ದಿನವೇ ಈ ಪಾಡ್ಯ. ಹೀಗೆ ಎಲ್ಲ ಯುಗಗಳಲ್ಲಿಯೂ ದುಷ್ಟರ ನಿಗ್ರಹ ಮಾಡಿ ವಿಜಯದ ಸಂಕೇತವನ್ನು ಹೊಂದಿದ ವಿಶಿಷ್ಟ ದಿನ ದೀಪಾವಳಿಯ ಈ ಬಲಿಪ್ರತಿಪದೆಯ ದಿನ.
ಯಮದ್ವಿತೀಯಾ: ಬಲಿಪಾಡ್ಯದ ಮರುದಿನ ದ್ವಿತೀಯಾದಂದು ಯಮನನ್ನು ಮತ್ತು ಯಮದೂತರಾದ ಚಿತ್ರಗುಪ್ತಾದಿಗಳನ್ನು ಪೂಜಿಸುವ ಸಂಪ್ರದಾಯವಿದೆ. ಈ ದಿನದಂದು ಯಮದೇವನು ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಅಲ್ಲಿ ತಂಗಿಯ ಕೈಯಿಂದಲೇ ಭೋಜನ ಸ್ವೀಕರಿಸಿದನು. ಅವಳಿಗೆ ದೀರ್ಘಸೌಮಂಗಲ್ಯವನ್ನು ಹರಿಸಿದನು. ಹೀಗೆ ಈ ದಿನ ಅಣ್ಣ-ತಮ್ಮಂದಿರು ತಮ್ಮ ಅಕ್ಕ-ತಂಗಿಯರ ಮನೆಗೆ ಹೋಗಿ ಭೋಜನ ಮಾಡಿದರೆ ಸೋದರ-ಸೋದರಿಯರ ಆಯುಷ್ಯಾಭಿವೃದ್ಧಿಯ ಜೋತೆಗೆ ಸೋದರಿಯ ಸೌಮಂಗಲ್ಯಾಭಿವೃದ್ಧಿಯಾಗುತ್ತದೆ.
ಮೇಧಾ ಪ್ರಹ್ಲಾದಾಚಾರ್ಯ ಜೋಶಿ