ಮುಂಬೈ: ಮಹಾರಾಷ್ಟ್ರದ ಖ್ಯಾತ ಚಿತ್ರಕಲಾವಿದ ಮತ್ತು ಫೋಟೋಗ್ರಾಫರ್ ರಾಮ್ ಇಂದ್ರನಿಲ್ ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಬೈ ಮೂಲದ ಪ್ರಸಿದ್ಧ ಕಲಾವಿದ ರಾಮ್ ಇಂದ್ರನಿಲ್ ಕಾಮತ್ (41) ಅವರು ತನ್ನ ತಾಯಿಯೊಂದಿಗೆ ಮುಂಬೈನ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಬುಧವಾರ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಕಾಮತ್ ಅವರು ಜನಪ್ರಿಯ ವರ್ಣಚಿತ್ರಕಾರರಾಗಿದ್ದರು. ಜೊತೆಗೆ ಫೋಟೋಗ್ರಾಫರ್ ಆಗಿ ಕೂಡ ಕೆಲಸ ಮಾಡುತ್ತಿದ್ದರು. ಅವರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮುಂಬೈನ ಮಾಟುಂಗಾದಲ್ಲಿರುವ ಅವರ ನಿವಾಸದಲ್ಲಿ ಬಾತ್‍ಟಬ್‍ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ಮಾಟುಂಗಾ ಪೊಲೀಸರು ಬುಧವಾರ ತಿಳಿಸಿದ್ದರು. ಬಾತ್‍ಟಬ್‍ನಲ್ಲಿ ಬಿದ್ದಿದ್ದ ಅವರನ್ನು ತಕ್ಷಣ ಮುಂಬೈನ ಸಿಯಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಮುಂಬೈ ಪೊಲೀಸ್ ವಕ್ತಾರ ಎನ್ ಅಂಬಿಕಾ, ಪ್ರಸಿದ್ಧ ಕಲಾವಿದ ರಾಮ್ ಇಂದ್ರನಿಲ್ ಕಾಮತ್ ಆಗಸ್ಟ್ 19ರಂದು ಮಾಟುಂಗಾದಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರೆ ಬರೆದ ಡೆತ್‍ನೋಟ್ ಕೂಡ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಕಾಮತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜೊತೆಗೆ ದೂರು ದಾಖಲಿಸಿಕೊಂಡು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.