ಬೆಳಗಾವಿ: ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಮತ್ತು ಕಾವಲ್‌ಭೈರಸಂದ್ರದಲ್ಲಿ ನಡೆದ ಗಲಭೆ ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗ ದಳ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು.
‘ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಅಮಾಯಕರಿಗೆ ತೊಂದರೆ ಕೊಟ್ಟಿದ್ದಾರೆ. ಪೊಲೀಸ್ ಠಾಣೆ ಹಾಗೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇದು ಪೂರ್ವಯೋಜಿತ ಹಾಗೂ ಅತ್ಯಂತ ವ್ಯವಸ್ಥಿತವಾಗಿ ನಡೆದ ಘಟನೆಯಾಗಿದೆ. ಇದರಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಘಟನೆಗೆ ಕಾರಣವಾದ ಸಂಘಟನೆಗಳನ್ನು ಕೂಡಲೇ ನಿಷೇಧಿಸಬೇಕು’ ಎಂದು ಒತ್ತಾಯಿಸಿದರು.
‘ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು.
ಗಲಭೆ ನಿಯಂತ್ರಿಸುವಲ್ಲಿ ನಡೆಸಿದ ಪೊಲೀಸ್ ಕಾರ್ಯಾಚರಣೆ ಸಮರ್ಥಿಸಿಕೊಳ್ಳಬೇಕು. ಗಲಭೆಯಲ್ಲಿ ಪಾಲ್ಗೊಂಡು ಪೊಲೀಸರಿಂದ ಹತ್ಯೆಯಾದ ಯಾರಿಗೂ ಪರಿಹಾರ ಕೊಡಬಾರದು. ಸಂತ್ರಸ್ತರಾಗಿರುವ ಅಮಾಯಕ ಹಿಂದೂಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
‘ಕರ್ತವ್ಯನಿರತ ಪೊಲೀಸರಿಗೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು. ಇಡೀ ಘಟನೆಯನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಶ್ರೀಕಾಂತ ಕದಂ, ಕೃಷ್ಣ ಭಟ್, ಬಸವರಾಜ ಗಾಣಗಿ, ಆನಂದ, ಆದಿನಾಥ ಗಾವಡೆ ಇದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??