ತುಮಕೂರು : ಸಾಮಾಜಿಕ ಅಂತರ ಕಾಪಾಡಿಕೊಂಡು ರಾಜ್ಯ ವಿಧಾನ ಸಭಾ ಅಧಿವೇಶನ ಹೇಗೆ ನಡೆಸೋದು? ಒಂದು ಆಸನ ಬಿಟ್ಟು ಇನ್ನೊಂದು ಆಸನದಲ್ಲಿ ಕುಂತರೂ ಕ್ರಮೇಣ ಅಂತರ ಮರೆಯಾಗುತ್ತದೆ. ಇದರಿಂದ ಮತ್ತೆ ಸೋಂಕು ಹರಡುವ ಭೀತಿ ಕಾಡುತ್ತದೆ. ಆದರೆ ತುಮಕೂರು ಜಿಲ್ಲಾ ಪಂಚಾಯತಿ ಸಿಇಒ ಶುಭಾ ಕಲ್ಯಾಣ್ ಸಭೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಭಿನ್ನ ಆಲೋಚನೆಯೊಂದನ್ನು ಮಾಡಿದ್ದಾರೆ.
ಸಾಮಾಜಿಕ ಅಂತರದಿಂದ ಕೊರೋನಾ ಮಟ್ಟ ಹಾಕಬಹುದು ಅಂತಾ ಸರ್ಕಾರ ಘೋಷಿಸಿದೆ. ಸಚಿವರು, ಶಾಸಕರು ಅಲ್ಲದೆ ಹಿರಿಯ ಅಧಿಕಾರಿಗಳ ಸಭೆಗಳಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಕೆಲವೊಮ್ಮೆ ಹಾದಿ ತಪ್ಪುತಿತ್ತು. ಇದನ್ನ ಗಮನಿಸಿದ ತುಮಕೂರು ಜಿ.ಪಂ. ಸಿಇಒ ಶುಭಾ ಕಲ್ಯಾಣ್ ವಿನೂತನ ಪ್ರಯೋಗ ಮಾಡಿದ್ದಾರೆ. ಅದೇನೆಂದರೆ ಹಸಿರೇ ಉಸಿರು ಎನ್ನುವ ಪ್ಲಾನ್.
ಅಂದರೆ ಸಭೆಯಲ್ಲಿ ಕೂರುವ ಆಸನಗಳ ನಡುವೆ ಕುಂಡದ ಸಸಿಗಳನ್ನು ಇಡುವುದು. ಹೌದು ಜಿ.ಪಂ ಸಭಾಂಗಣದಲ್ಲಿ ಪ್ರತಿ ಆಸನಗಳ ನಡುವೆ ಗಿಡಗಳನ್ನು ಇಟ್ಟು ಸಭೆಗೆ ಹಾಜರಾದ ಅಧಿಕಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಕಟ್ಟೆಚ್ಚರ ವಹಿಸಲಾಗಿದೆ. ಪರಸ್ಪರ ಎರಡು ಆಸನಗಳ ಮಧ್ಯೆ ಸಸಿ ಇರುವುದರಿಂದ ಅಧಿಕಾರಿಗಳು ಅಪ್ಪಿತಪ್ಪಿಯೂ ಸಾಮಾಜಿಕ ಅಂತರ ಉಲ್ಲಂಘಿಸಲು ಸಾಧ್ಯವಿಲ್ಲ. ಸಿಇಒ ಶುಭಾ ಕಲ್ಯಾಣ್ ಅವರ ಈ ಪ್ಲಾನ್ ಸದ್ಯ ಸಕ್ಸಸ್ ಆಗಿದೆ