Breaking News

ಇಂದಿನಿಂದ ಸಾರಿಗೆ, ಪೊಲೀಸ್ ಇಲಾಖೆಗಳಲ್ಲಿ ಬಾಕಿ ಇರುವ ಉಲ್ಲಂಘನಾ ಕೇಸ್​ಗಳ ದಂಡ ಪಾವತಿಗೆ ಶೇ.50ರಷ್ಟು ವಿನಾಯಿತಿ: ಡಿ.12ರವರೆಗೆ ಮಾತ್ರ ಅವಕಾಶ

Spread the love

ಬೆಂಗಳೂರು: ಸಂಚಾರಿ ಇ-ಚಲನ್​​ನಲ್ಲಿ ದಾಖಲಾಗಿರುವ ಸಂಚಾರ ಉಲ್ಲಂಘನೆ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ ಬಾಕಿ ಇರುವ ದಂಡ ಪಾವತಿಸಲು ಶೇಕಡಾ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕಳೆದ ಆಗಸ್ಟ್ 23ರಿಂದ ಸೆಪ್ಟೆಂಬರ್​ 12ರವರೆಗೆ ಇ-ಚಲನ್​ನಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇಕಡಾ 50ರಷ್ಟು ದಂಡಪಾವತಿಗೆ ವಿನಾಯಿತಿ ನೀಡಿತ್ತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಹೀಗಾಗಿ, ಟ್ರಾಫಿಕ್ ವೈಯಲೇಷನ್ ಕೇಸ್​​ಗಳಿಗೆ ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಮತ್ತೆ ಅವಕಾಶ ಕಲ್ಪಿಸಿದೆ.

ಸಾರಿಗೆ ಇಲಾಖೆಯಲ್ಲಿ ಬಾಕಿಯಿರುವ ಪ್ರಕರಣಗಳಿಗೂ ಇದೇ ಮೊದಲ ಬಾರಿಗೆ ಶೇಕಡಾ 50ರಷ್ಟು ದಂಡ ಪಾವತಿಗೆ ಅನುವು ಮಾಡಿಕೊಡಲಾಗಿದೆ. 1991ರಿಂದ 2019-20ರ ಆರ್ಥಿಕ ಸಾಲಿನವರೆಗೆ ಬಾಕಿ ಇರುವ ಪ್ರಕರಣಗಳಿಗೆ ದಂಡ ಪಾವತಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಾರಿಗೆ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಬಾಕಿಯಿರುವ ದಂಡ ಪ್ರಕರಣಗಳಿಗೆ ಶೇಕಡಾ 50ರಷ್ಟು ದಂಡ ಪಾವತಿಸಲು ನವೆಂಬರ್​​ 21 (ಇಂದು) ರಿಂದ ಡಿಸೆಂಬರ್​​ 12ರ ವರೆಗೆ ಕಾಲಾವಕಾಶ ನೀಡಲಾಗಿದೆ. 2019ರಿಂದ 2025ರ ಸೆಪ್ಟೆಂಬರ್ ಅಂತ್ಯಕ್ಕೆ 4.44 ಕೋಟಿ ಸಂಚಾರ ಉಲ್ಲಂಘನಾ ಪ್ರಕರಣಗಳಿಂದ 2,695 ಕೋಟಿ ರೂ.ಗಳಿಗಿಂತ ಹೆಚ್ಚು ದಂಡ ಬಾಕಿಯಿದೆ.

ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರ ವರೆಗೆ 4,27,837 ಲಕ್ಷ ದಂಡ ಪ್ರಕರಣಗಳು ಬಾಕಿಯಿದ್ದು, ದಂಡದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ದರದಲ್ಲಿ ಕಟ್ಟಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ಈ ಬಗ್ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಶಿಧರ್ ಮಾತನಾಡಿ, ”ಸಾರಿಗೆ ಇಲಾಖೆಯಲ್ಲಿ 1991ರಿಂದ 2020ರವರೆಗೆ ಬಾಕಿಯಿರುವ ಪ್ರಕರಣಗಳು ಹಾಗೂ ಸಂಚಾರಿ ಇ – ಚಲನ್​ನಲ್ಲಿ ದಾಖಲಾಗಿರುವ ಉಲ್ಲಂಘನಾ ಪ್ರಕರಣಗಳಿಗೆ ಶೇಕಡಾ 50ರಷ್ಟು ದಂಡ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಈವರೆಗೂ 4.44 ಕೋಟಿಗಿಂತ ಹೆಚ್ಚು ಸಂಚಾರ ಉಲ್ಲಂಘನೆ ಪ್ರಕರಣಗಳಿವೆ. ವಾಹನ ಸವಾರರು ಹಾಗೂ ಚಾಲಕರು ನಿಗದಿತ ಅವಧಿಯೊಳಗೆ ಶೇಕಡಾ 50ರಷ್ಟು ದಂಡ ಪಾವತಿಸಿ, ಪ್ರಕರಣಗಳ ವಿಲೇವಾರಿ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಲ್ಲಿ 106 ಕೋಟಿ ರೂ. ದಂಡ ಸಂಗ್ರಹ: ಈ ಹಿಂದೆ ಇ-ಚಲನ್‌ನ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಕಳೆದ ಆಗಸ್ಟ್ 23ರಿಂದ ಸೆಪ್ಟೆಂಬರ್​ 12ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 106 ಕೋಟಿ ರೂ. ದಂಡ ಸಂಗ್ರಹವಾಗಿತ್ತು. ಎಲ್ಲಾ ವಿಧಾನಗಳ ಮೂಲಕ ಒಟ್ಟು 37,83,173 ಪ್ರಕರಣಗಳು ಇತ್ಯರ್ಥವಾಗಿದ್ದು, 106,00,19,550 ರೂ. ದಂಡ ಸಂಗ್ರಹಣೆಯಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ತಿಳಿಸಿತ್ತು.

ಬಿಟಿಪಿ ಅಸ್ತ್ರಂ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್​​​ಪಿ) ಆ್ಯಪ್, ಬೆಂಗಳೂರು ಸಂಚಾರ ಪೊಲೀಸ್ ಅಥವಾ ಕರ್ನಾಟಕ ಒನ್ ವೆಬ್‌ಸೈಟ್‌ನಲ್ಲಿ ವಾಹನದ ನೊಂದಣಿ ಸಂಖ್ಯೆಯನ್ನು ನಮೂದಿಸಿ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಸಲು ಅವಕಾಶ ನೀಡಲಾಗಿತ್ತು.


Spread the love

About Laxminews 24x7

Check Also

ಖಾನಾಪೂರ ತಹಶೀಲ್ದಾರರಾಗಿ ಮಂಜುಳಾ ಕೆ. ನಾಯಕ್ ನೇಮಕ ; ದುಂಡಪ್ಪ ಕೋಮಾರ್ ವರ್ಗಾವಣೆ

Spread the love ಖಾನಾಪೂರ :- ಖಾನಾಪೂರ ತಾಲೂಕಿನಲ್ಲಿ ಆಡಳಿತಾತ್ಮಕ ಬದಲಾವಣೆ ಸಂಭವಿಸಿದ್ದು, ತಾಲೂಕಿನ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ