ಉಡುಪಿ: ಯಕ್ಷಗಾನ ವೇಷಧಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆಯಿತು.
ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ (51) ಮೃತಪಟ್ಟವರು. ಇವರು ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದಾರೆ.
ಮಂದಾರ್ತಿ ಮೇಳದಲ್ಲಿ ಇವರ ತಂದೆಯೂ ವೇಷಧಾರಿಯಾಗಿದ್ದರು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರ ಗೌಡ ಪಾತ್ರ ನಿರ್ವಹಿಸಿದ್ದರು. ಯಕ್ಷಗಾನ ಕಲಾವಿದರು ಮತ್ತು ಯಕ್ಷಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಈಶ್ವರ ಗೌಡ ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೂರು ದಶಕಗಳ ಕಾಲ ಕಲಾಸೇವೆ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರಾದ ಈಶ್ವರ ಗೌಡರು ಶಿವರಾಜಪುರ, ಮೇಗರವಳ್ಳಿ, ಮಡಾಮಕ್ಕಿ, ಅಮೃತೇಶ್ವರಿ, ಮಂದಾರ್ತಿ ಮೇಳಗಳಲ್ಲಿ ಸುಮಾರು ಮೂರು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದರು. ಪೌರಾಣಿಕ ಪುರುಷ ಪಾತ್ರಗಳನ್ನು ಸಮರ್ಥವಾಗಿ ರಂಗದಲ್ಲಿ ಪ್ರಸ್ತುತಗೊಳಿಸಿ ಕಲಾಸಿದ್ಧಿ ಪಡೆದಿದ್ದರು.
ಅಂತ್ಯಸಂಸ್ಕಾರ ಇಂದು ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಬುಕ್ಡಿಬೖಲಿನಲ್ಲಿ ಜರುಗಲಿದೆ. ಮಂದಾರ್ತಿ ಮೇಳದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಸಂತಾಪ ಸೂಚಿಸಿದ್ದಾರೆ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ: ಕಲಾವಿದ ಹಾಗೂ ಎಎಸ್ಐ ಅಧಿಕಾರಿಯಾಗಿದ್ದ ಚಂದ್ರಕಾಂತ ಹುಟಗಿ ಎಂಬವರು ಹೃದಯಾಘಾತವಾಗಿ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಿಧನ ಹೊಂದಿದ್ದರು. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದರು. ಉತ್ತಮ ಕಲಾವಿದರೂ ಆಗಿದ್ದರು. ನಟರಾಗಿ, ಸಂಗೀತಗಾರರಾಗಿ, ಕೊಳಲುವಾದಕರಾಗಿ ತಮ್ಮೂರಿನಲ್ಲಿ ಚಿರಪರಿಚಿತರು. ಇವರ ಕಣ್ಣುಗಳನ್ನು ದಾನ ಮಾಡಲಾಗಿದೆ.
ದೇಶದಲ್ಲಿ ಹೃದಯಾಘಾತದಿಂದಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿರ್ಲಕ್ಷಿಸದೆ ತಪಾಸಣೆಗೆ ಒಳಪಟ್ಟರೆ ಪ್ರಾಣ ಕಾಪಾಡಿಕೊಳ್ಳಲು ಸಾಧ್ಯವಿದೆ.
Laxmi News 24×7