ದಾವಣಗೆರೆ: ಆಟೋ ಚಾಲಕರಿಬ್ಬರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಗರದ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ಗುರುವಾರ (ಅ.9) ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಾಲಕಿ ಹಾಗೂ ಬಾಲಕ ಒಟ್ಟಿಗೆ ಬಂದಿದ್ದರು. ಬಳಿಕ ಅಪ್ರಾಪ್ತರಿಬ್ಬರೂ ತಮ್ಮ ಮನೆಗೆ ತೆರಳಲು ಬಾಡಿಗೆ ಮಾತನಾಡಿಕೊಂಡು ಆಟೋ ಹತ್ತಿದ್ದರು. ಆದರೆ ಚಾಲಕಬ್ಬರು ಮನೆಯ ವಿಳಾಸಕ್ಕೆ ತೆರಳದೆ, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂದರ್ಭದಲ್ಲಿ ಆರೋಪಿಗಳು ಬಾಲಕಿಯ ಬಳಿ ಇದ್ದ ಮೊಬೈಲ್ ಹಾಗೂ ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಸಂತ್ರಸ್ತ ಬಾಲಕಿ ಕೂಡಲೇ ಆರ್ಎಂಸಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾಳೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆಟೋ ಚಾಲಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ದಾವಣಗೆರೆ ಎಸ್ಪಿ ಉಮಾಪ್ರಶಾಂತ್, “ಬಾಲಕಿ ಹಾಗೂ ಬಾಲಕ ಇಬ್ಬರೂ ಪ್ರೇಮಿಗಳಾಗಿದ್ದು, ದಾವಣಗೆರೆಗೆ ಬಂದು ಬಸ್ ಇಳಿದಿದ್ದರು. ನಂತರ ಆಟೋದಲ್ಲಿ ಪ್ರಯಾಣಿಸಿದ್ದಾರೆ. ಆದರೆ ಚಾಲಕರು ಹೇಳಿದ ವಿಳಾಸಕ್ಕೆ ತೆರಳುವ ಬದಲು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬಾಲಕಿಗೆ ಒತ್ತಾಯಿಸಿದ್ದಾರೆ. ಆದರೆ ಲೈಂಗಿಕ ಕ್ರಿಯೆಗೆ ಅಪ್ರಾಪ್ತೆ ನಿರಾಕರಿಸಿದ್ದು, ಆಕೆಯ ಬಳಿಯಿದ್ದ ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಿಕೊಂಡು, ಇಬ್ಬರೂ ಆರೋಪಿತ ಆಟೋ ಚಾಲಕರನ್ನು ಬಂಧಿಸಿದ್ದೇವೆ. ಇದು ಗುರುವಾರ ನಡೆದಿರುವ ಘಟನೆ. ಮುಂದಿನ ಕ್ರಮ ಕೈಗೊಳ್ಳಲಾಗಿದೆ” ಎಂದರು
Laxmi News 24×7