ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ರಾಜು ಕಾಗೆ ಹಾಗೂ ನಾನು ಕೂಡಿ ಒಂದು ಬಣ ಮಾಡಿದ್ದೇವೆ. ನಮ್ಮಲ್ಲಿಗೆ ಬರುವವರನ್ನು ಸ್ವಾಗತಿಸುತ್ತೇವೆ. ಹೋಗುತ್ತೇವೆ ಎನ್ನುವವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎನ್ನುವ ಮೂಲಕ ನಾವು ರೇಸ್ನಲ್ಲಿದ್ದೇವೆ ಎಂಬ ಸಂದೇಶವನ್ನು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪ್ರತಿದಿನ ಘಟಾನುಘಟಿ ನಾಯಕರು ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದು, ಇಂದು ಶುಕ್ರವಾರ ಅಥಣಿ ತಾಲೂಕಿನಿಂದ ಲಕ್ಷ್ಮಣ ಸವದಿ, ಕಾಗವಾಡ ತಾಲೂಕಿನಿಂದ ರಾಜು ಕಾಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಉಭಯ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪ್ರತಿನಿಧಿಗಳನ್ನು ಕರೆ ತಂದಿದ್ದರು. ಲಕ್ಷ್ಮಣ ಸವದಿ ಭಾವಚಿತ್ರ ಹಿಡಿದು ಅಭಿಮಾನಿಗಳು ಜಯಘೋಷ ಮೊಳಗಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮಣ ಸವದಿ, ನಮ್ಮ ಸಂಖ್ಯೆ 9 ಆಗುತ್ತೋ, 11 ಆಗುತ್ತೋ, 15 ಆಗುತ್ತವೆಯೋ ಎಂಬುದನ್ನು ಮೇಲೆ ಕುಳಿತು ಆಟ ಆಡಿಸುವನು ನಿರ್ಧರಿಸುತ್ತಾನೆ. ನಾವೆಲ್ಲ ಗೊಂಬೆಗಳಾಗಿ ಆಟ ಆಡುತ್ತೇವೆ ಅಷ್ಟೇ. ಸಸಿ ನಾಟಿ ಮಾಡಿದಾಗ ಸಣ್ಣದಿರುತ್ತದೆ. ದೊಡ್ಡದಾದ ಮೇಲೆ ಎಲೆ, ಕಾಯಿ, ಹೂವು ಬೆಳೆಯಲು ಶುರು ಮಾಡುತ್ತವೆ. ಆಗ ನಮ್ಮ ಜೊತೆಗೆ ಮತ್ತಷ್ಟು ನಿರ್ದೇಶಕರು ಬರುತ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿದರು.
ಸೂರ್ಯ, ಚಂದ್ರರಿಗೆ ಗ್ರಹಣಗಳು ಪ್ರತಿದಿನ ಹಿಡಿಯಲ್ಲ. ಸಂದರ್ಭ ಅನುಸಾರ ಗ್ರಹಣಗಳು ಬರುತ್ತವೆ. ಆ ಸಂದರ್ಭದಲ್ಲಿ ಪೂಜೆ, ಪುನಸ್ಕಾರ ಇತ್ಯಾದಿ ಮಾಡಬೇಕಾಗುತ್ತದೆ. ಸೂರ್ಯ, ಚಂದ್ರರಿಗೆ ಗ್ರಹಣ ಹಿಡಿದಾಗ ಅವರಿಗೆ ಒಳ್ಳೆಯದು ಆಗಲಿ ಅಂತ ನಾವು ಪೂಜೆ ಪುನಸ್ಕಾರ ಮಾಡುತ್ತೇವೆ ಎಂದು ಮಾರ್ಮಿಕವಾಗಿ ಹೇಳುತ್ತಲೇ ತಮ್ಮ ವಿರೋಧಿಗಳಿಗೆ ತಿರುಗೇಟು ಕೊಟ್ಟರು.
1995 ರಿಂದ ಸತತವಾಗಿ ಅಥಣಿ ತಾಲೂಕಿನಿಂದ ನನ್ನನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಳಿಸಲು ರಾಜು ಕಾಗೆ ಸಿಂಹಪಾಲು ಹೊಂದಿದ್ದರು. ಇಂದು ಸುದೈವದಿಂದ ಹೆಚ್ಚುವರಿಯಾಗಿ ಕಾಗವಾಡ ಕ್ಷೇತ್ರ ಬಂದಿದ್ದರಿಂದ ರಾಜು ಕಾಗೆ ಅವರ ಋಣ ಕಡಿಮೆ ಮಾಡುವ ವಿಚಾರ ಇಟ್ಟುಕೊಂಡು ಅವರನ್ನು ಅಭ್ಯರ್ಥಿ ಮಾಡಲಾಗಿದೆ. ರಾಜು ಕಾಗೆ ಹಾಗೂ ನಾನು ಆ ಭಾಗದಲ್ಲಿ ಜೋಡೆತ್ತು ಅಂತ ಕರೆಯುತ್ತಾರೆ ಎಂದರು.
ಜೋಡೆತ್ತು ಡಿಸಿಸಿ ಬ್ಯಾಂಕ್ಗೂ ಹೋಗಬೇಕು ಅಂತ ಆಸೆ ಪಟ್ಟಿದ್ದರು. 155 ಕೃಷಿ ಪತ್ತಿನ ಸಹಕಾರಿ ಸಂಘಗಳ ನಿರ್ದೇಶಕರು, ಅಧ್ಯಕ್ಷರು, ಕಾರ್ಯದರ್ಶಿಗಳು, ಹಿರಿಯರು ಮತ್ತು ಹಿತೈಷಿಗಳ ಒಪ್ಪಿಗೆ ಪಡೆದುಕೊಂಡು ಮಹಾತಪಸ್ವಿ ಶಿವಯೋಗಿಗಳ ಆಶೀರ್ವಾದ ಪಡೆದುಕೊಂಡು ಇಬ್ಬರು ನಾಮಪತ್ರ ಸಲ್ಲಿಸಿದ್ದೇವೆ ಎಂದು ವಿವರಿಸಿದರು.
ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಇಂದೂ ಅಲ್ಲ ಮುಂದೆಯೂ ಅಲ್ಲ. ನಾನು ಶಾಸಕ, ಮಂತ್ರಿ, ಉಪಮುಖ್ಯಮಂತ್ರಿ ಆದವನು. ಸಹಕಾರ ಇಲಾಖೆ ಸೇರಿ ವಿವಿಧ ಇಲಾಖೆ ನಿರ್ವಹಿಸಿದ್ದೇನೆ. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ, ಅಧ್ಯಕ್ಷ, ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷನಾಗಿ ಕೆಲಸ ಮಾಡಿದ್ದು, ಬೇರೆಯವರಿಗೆ ಅವಕಾಶ ಕೊಡಬೇಕು ಎನ್ನುವುದು ನನ್ನ ಬಯಕೆ. ಹಾಗಾಗಿ, ವೈಯಕ್ತಿಕವಾಗಿ ನಾನು ಅಧ್ಯಕ್ಷ ಆಗಬೇಕು ಎಂಬ ಆಲೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಗವಾಡ, ಅಥಣಿ ತಾಲೂಕುಗಳಿಗೆ ನಾವು ಅಭ್ಯರ್ಥಿ ಹಾಕಲ್ಲ ಎಂಬ ಬಾಲಚಂದ್ರ ಜಾರಕಿಹೊಳಿ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿದ ಮೇಲೆ ಸತ್ಯ, ಅಸತ್ಯ ಗೊತ್ತಾಗುತ್ತದೆ. ಅವರವರ ಹೇಳಿಕೆಗೆ ಅವರು ಬದ್ಧರಾಗಿದ್ದಾರೆ ಎಂಬ ಉತ್ತರ ಆಗ ಸಿಗುತ್ತದೆ. ಅಲ್ಲದೇ ಯಾರು ಏನೇ ಹೇಳಿಕೆ ಕೊಟ್ಟರೂ ಇವತ್ತಿನ ಸಂದರ್ಭಕ್ಕೆ ಅದು ಅಪ್ರಸ್ತುತ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.