ಬೆಂಗಳೂರು: ಕನ್ನಡ ಸಾಹಿತ್ಯಲೋಕದ ಹಿರಿಯ ಸಾಹಿತಿ, ಕಾದಂಬರಿಕಾರ, ತತ್ವಜ್ಞಾನಿ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಎಸ್ ಎಲ್ ಭೈರಪ್ಪ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಹೃದಯಸ್ತಂಭನದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ 2:38ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶೈಲಾ ಹೆಚ್ ಎನ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಭೈರಪ್ಪ ಅವರು ತಮ್ಮ ಜನಪ್ರಿಯ ಕಾದಂಬರಿಗಳಾದ ‘ವಂಶವೃಕ್ಷ’, ‘ದಾಟು’, ‘ಪರ್ವ’, ‘ಮಂದಾರ’ ಸೇರಿದಂತೆ ಇನ್ನಿತರ ಸಾಹಿತ್ಯದ ಕೃಷಿಯಿಂದ ಹೆಸರುವಾಸಿಯಾಗಿದ್ದಾರೆ.
ಅವರ ಹೆಚ್ಚಿನ ಕೃತಿಗಳನ್ನು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ. ಭೈರಪ್ಪ ಅವರು ಪದ್ಮಭೂಷಣ, ಪದ್ಮಶ್ರೀ, ಸರಸ್ವತಿ ಸಮ್ಮಾನ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.
ಅವರ ‘ನಾಯಿ-ನೆರಳು’, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’ ಮುಂತಾದ ಕೃತಿಗಳು ಚಲನಚಿತ್ರಗಳಾಗಿ ಮತ್ತು ‘ಗೃಹಭಂಗ’ ಮತ್ತು ‘ದಾಟು’ ಟಿವಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದವು.