ದಾವಣಗೆರೆ, ಸೆಪ್ಟೆಂಬರ್ 16: ಜಾತಿಗಣತಿಯಲ್ಲಿ (Caste Census) ಕ್ರಿಶ್ಚನ್ ಸಮುದಾಯದಲ್ಲಿನ ಉಪಜಾತಿಗಳ ಕಾಲಂ ಈಗಾಗಲೇ ಭಾರಿ ವಿವಾದ ಸೃಷ್ಟಿಸಿದೆ. ಇದೀಗ, ಲಿಂಗಾಯತ ಪ್ರತ್ಯೇಕ ಧರ್ಮದ ವಿವಾದವೂ ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಜಾತಿಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಲಿಂಗಾಯತ ಧರ್ಮ (Lingayat) ಎಂದು ಬರೆಸಲು ಸ್ವಾಮೀಜಿಗಳು ಸೂಚನೆ ನೀಡಿದ್ದಾರೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಅಭಿಪ್ರಾಯಕ್ಕೆ ಬರಲಾಗಿದ್ದು, ಧರ್ಮದ ಕಾಲಂನಲ್ಲಿ ಇತರೆ ಎಂಬ ಆಯ್ಕೆಯಲ್ಲಿ ಲಿಂಗಾಯತ ಧರ್ಮ ಎಂದು ಬರೆಯುವಂತೆ ದಾವಣಗೆರೆಯ ಬಾಪೂಜಿ ಸಮುದಾಯ ಭವನದಲ್ಲಿ ನಡೆದ ಬಸವ ಸಂಸ್ಕೃತಿ ಬಹಿರಂಗ ಸಭೆಯಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೂಚಿಸಿದ್ದಾರೆ.
ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಜನಗಣತಿಯ ಅರ್ಜಿಯಲ್ಲಿ ಸೇರ್ಪಡೆ ಮಾಡಲು ಪ್ರಧಾನಿಯವರನ್ನು ಭೇಟಿಯಾಗಿ ಮನವಿ ಮಾಡುವುದಕ್ಕೂ ಸ್ವಾಮೀಜಿಗಳು ನಿರ್ಧರಿಸಿದ್ದಾರೆ.
ಮತ್ತೊಂದೆಡೆ, ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುತ್ತಿರುವ ಸ್ವಾಮೀಜಿಗಳ ವಿರುದ್ದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಸ್ವಾಮೀಜಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.ದಿಂಗಾಲೇಶ್ರ ಶ್ರೀಗಳಿಗೆ ವಚನಾನಂದ ಶ್ರೀ ತಿರುಗೇಟು ಕೊಟ್ಟಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗಿರುವುದು ಪಂಚಮಸಾಲಿಗಳು. ಹೀಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮತ್ತು ಜಾಗತಿಕ ಲಿಂಗಾಯತ ಮಹಾಸಭಾಕ್ಕೂ ಪಂಚಮಸಾಲಿ ಪೀಠಗಳಿಗೂ ಸಂಬಂಧವಿಲ್ಲ ಎಂದಿದ್ದಾರೆ.