ಬೆಂಗಳೂರು: ಇಪ್ಪತಕ್ಕೂ ಹೆಚ್ಚು ವರ್ಷಗಳ ಕಾಲ ಸೆರೆವಾಸಕ್ಕೊಳಗಾಗುವ ಅಪರಾಧಿಗಳು ನಿಗದಿತ ಅವಧಿಯ ಜೈಲು ವಾಸದ ಬಳಿಕ ಶಿಕ್ಷೆಯ ಮಾಫಿ ಕೋರಿ ಸಲ್ಲಿಸುವ ಮನವಿ ತಿರಿಸ್ಕರಿಸಬೇಕು ಎಂಬ ನಿಯಮವಿಲ್ಲ ಎಂದು ಹೈಕೋರ್ಟ್ ಇಂದು ಸ್ಪಷ್ಟಪಡಿಸಿದೆ.
ಅಪರಾಧಿಗಳಿಗೆ ಶಿಕ್ಷೆ ವಿಧಿಸುವ ಆದೇಶದಲ್ಲಿ ಶಿಕ್ಷೆಯ ಮಾಫಿ ಕುರಿತು ಪ್ರಸ್ತಾಪವಿಲ್ಲದಿದ್ದಂತಹ ಸಂದರ್ಭದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಬೇಕೆಂದಿಲ್ಲ. ಇಂತಿಷ್ಟು ವರ್ಷ ಶಿಕ್ಷೆಯ ಬಳಿಕ ಶಿಕ್ಷೆಯ ಮಾಫಿ, ಪೆರೋಲ್, ಅವಧಿಪೂರ್ವ ಬಿಡುಗಡೆಗೆ ಅರ್ಹರಾಗಿರುತ್ತಾರೆ ಎಂದು ಪೀಠ ತಿಳಿಸಿದೆ.
ತನ್ನ ಪತಿ, ಅತ್ತೆ ಹಾಗೂ ಮೈದುನನ ಶಿಕ್ಷೆ ಮಾಫಿ ಕೋರಿದ್ದ ಮನವಿ ತಿರಸ್ಕರಿಸಿದ್ದ ಜೈಲು ಅಧಿಕಾರಿಗಳ ಕ್ರಮ ಪ್ರಶ್ನಿಸಿ ನಗರದ ಸುಬ್ರಹ್ಮಣ್ಯಪುರದ ನಿವಾಸಿ ದೀಪ ಅಂಗಡಿ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿತು.
ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ 2021ರ ನಿಯಮಗಳ ಪ್ರಕಾರ, ಕೈದಿಯ ಶಿಕ್ಷೆಯ ವಿನಾಯಿತಿ ಅಥವಾ ಕ್ಷಮಾಧಾನ ಎಂಬುದು ಅವರ ಸುಧಾರಣೆಯಾಗುವ ಗುರಿ ಹೊಂದಿದೆ. ಜೈಲಿನಲ್ಲಿನ ಕೈದಿಗಳ ಶಿಸ್ತು ಮತ್ತು ಉತ್ತಮ ನಡುವಳಿಕೆ, ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶವಿದೆ. ಜೈಲಿನಲ್ಲಿರುವ ಸಂದರ್ಭದಲ್ಲಿ ಉತ್ತಮ ನಡುವಳಿಕೆ ಮತ್ತು ಶಿಸ್ತು ತೋರಿದಲ್ಲಿ ಬಿಡುಗಡೆಗೆ ಅರ್ಹರಾಗಿರಲಿದ್ದಾರೆ.
20 ವರ್ಷಗಳಿಗಿಂತಲೂ ಹೆಚ್ಚು ಅವಧಿಗೆ ಶಿಕ್ಷೆಗೆ ಗುರಿಯಾದ ಕೈದಿಗಳ ಶಿಕ್ಷೆಯ ಮಾಫಿ ನಿರಾಕರಿಸುವುದಕ್ಕೆ ಸಂಬಂಧಿಸಿದಂತೆ ನಿಯಮ 164ರಲ್ಲಿ ನಿರ್ದಿಷ್ಟವಾದ ನಿರ್ಬಂಧವಿಲ್ಲ. ಅಲ್ಲದೆ, ಅಂತಹ ಕೈದಿಗಳನ್ನು ಬಿಡುಗಡೆ ಮಾಡುವುದು ಹಾಗೂ ಮತ್ತೆ ವಶಕ್ಕೆ ಪಡೆಯುವುದು ಜೈಲು ಮಹಾನಿರ್ದೇಶಕರು ಸೇರಿ ಜೈಲು ಅಧಿಕಾರಿಗಳಿಗೆ ಅವಕಾಶವಿರಲಿದೆ. ಆದರೆ, ಅರ್ಜಿದಾರರ ಸಂಬಂಧಿಕರಿಗೆ 21 ವರ್ಷ ಶಿಕ್ಷೆ ವಿಧಿಸಿರುವ ಕಾರಣ ನೀಡಿ ಶಿಕ್ಷೆ ಮಾಫಿ ಕೋರಿದ್ದ ಅರ್ಜಿ ತಿರಸ್ಕರಿಸಲಾಗಿದೆ.
ಆದರೆ, ರಾಜೇಂದ್ರ ಮಂಡಲ್ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಶಿಕ್ಷೆ ಜೀವಾವಧಿಗೆ ಪರಿವರ್ತಿಸಿದಲ್ಲಿ 14 ವರ್ಷಗಳ ಬಳಿಕ ಬಿಡುಗಡೆ ಮಾಡಬಹುದು ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. 20 ವರ್ಷ ಮತ್ತು ಅದಕ್ಕಿಂತಲೂ ಹೆಚ್ಚು ವರ್ಷಗಳ ಕಾಲದ ಶಿಕ್ಷೆಯನ್ನೂ ಜೀವಾವಧಿ ಶಿಕ್ಷೆ ಎಂಬುದಾಗಿ ಪರಿಗಣಿಸಬಹುದು ಎಂದು ಪೀಠ ಹೇಳಿದೆ.
ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು, ಬಳಿಕ 21 ವರ್ಷಗಳಿಗೆ ಮಾರ್ಪಡಿಸಲಾಗಿದೆ. ಇದೇ ಕಾರಣದಿಂದ ಪೆರೋಲ್ ನೀಡಬಾರದು ಮತ್ತು ಶಿಕ್ಷೆಯ ಮಾಫಿ ಮಾಡಬಾರದು ಎಂಬ ಷರತ್ತಿಲ್ಲ. ಆದ್ದರಿಂದ ಅರ್ಜಿದಾರ ಸಂಬಂಧಿಕರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ತಮ್ಮ ವಿವೇಚನೆ ಬಳಸಿ ಶಿಕ್ಷೆ ಮಾಫಿ ಕೋರಿರುವ ಅರ್ಜಿಗಳನ್ನು ಮರು ಪರಿಶೀಲನೆ ಮಾಡಬೇಕು. ಮುಂದಿನ ಎರಡು ವಾರಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಉಮ್ಮೆ ಸಲ್ಮಾ ವಾದ ಮಂಡಿಸಿದ್ದರು.