ಚಿತ್ರದುರ್ಗ(ಜು.06): ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಒಬ್ಬೊಬ್ಬರಿಗೆ ಹರಡಿದ ಕೊರೋನಾ ಸೋಂಕು ಈಗ ಚಿತ್ರದುರ್ಗ ಜಿಲ್ಲಾ ಸೀನಿಯರ್ ಡಿವಿಷನ್ ನ್ಯಾಯಾಲಯಕ್ಕೆ ಕಾಲಿಟ್ಟಿದೆ.
ನಿನ್ನೆ ಚಿತ್ರದುರ್ಗದ ಸಿಜೆಎಂ ನ್ಯಾಯಾಲಯದ ಟೈಪಿಸ್ಟ್ ಗೆ ಕೊರೋನಾ ಪಾಸಿಟಿವ್ ಬಂದಿದು ಜಿಲ್ಲೆಯ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಚಿತ್ರದುರ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯೂರು ಮೂಲದ 33 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಈತ ಪ್ರತೀ ದಿನವೂ ಹಿರಿಯೂರಿನಿಂದ ಚಿತ್ರದುರ್ಗಕ್ಕೆ KSRTC ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಎಂದು ತಿಳಿದು ಬಂದಿದೆ. ಹೀಗಾಗಿ ಪ್ರಯಾಣಿಕರಿಗೂ ಕೊರೋನಾ ಆತಂಕ ಮನೆ ಮಾಡಿದೆ.
ಸದ್ಯ ಕೊರೋನಾ ಸೋಂಕಿತ ವ್ಯಕ್ತಿಯನ್ನು ಧರ್ಮಪುರ ಗ್ರಾಮದ ಕೋವಿಡ್ ಹೆಲ್ತ್ ಕೇರ್ ಸೆಂಟರ್ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು ತಂದೆ, ತಾಯಿ, ಅಕ್ಕ, ಭಾವ ಸೇರಿದಂತೆ 23 ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವುದು ಪತ್ತೆಯಾಗಿದೆ.
ಇನ್ನು, ಬಸ್ಸಿನಲ್ಲಿ ಪ್ರಯಾಣ ಮಾಡಿದ್ದವರ ಪತ್ತೆಗೆ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ. ಅಲ್ಲದೇ ಈ ವ್ಯಕ್ತಿ ಜಿಲ್ಲಾ ಟ್ರೆಸರಿಗೂ ಭೇಟಿ ನೀಡಿದ್ದ ಎನ್ನಲಾಗಿದೆ. ಜಿಲ್ಲೆಯ ಹೊಸದುರ್ಗದಲ್ಲಿ 55 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಚಳ್ಳಕರೆಯ 39 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 50 ಜನರು ಗುಣಮುಖರಾಗಿದ್ದಾರೆ. ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 33 ಉಳಿದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.