Breaking News

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love

ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಮೇಲೇಳಲಿದೆ.
ಅಂದ ಹಾಗೆ ಈ ವಿಷಯವನ್ನು ಆಪ್ತರೊಡನೆ ಹಂಚಿಕೊಂಡ ಪವರ್ ಫುಲ್ ನಾಯಕರೊಬ್ಬರು:’ಸಿದ್ಧರಾಮಯ್ಯ ಸಿಎಂ ಆಗಿರುವವರೆಗೆ ದಲಿತರು ಈ ಹುದ್ದೆಗಾಗಿ ಪಟ್ಟು ಹಿಡಿಯುವುದಿಲ್ಲ.ಯಾಕೆಂದರೆ ರಾಜ್ಯದ ಅಹಿಂದ ವರ್ಗಗಳಿಗೆ ಅವರು ನಿರ್ವಿವಾದ ನಾಯಕ.ಆದರೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿಲ್ಲವಲ್ಲ?ಹೀಗಾಗಿ ದಲಿತರು ತಮ್ಮ ಹಕ್ಕಿಗಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’ ಎನ್ನುತ್ತಿದ್ದರು.
ಅವರ ಪ್ರಕಾರ:’ಇಂತಹ ಪೂರ್ವ ತಯಾರಿಯ ಭಾಗವಾಗಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ದಲಿತ ಸಮಾವೇಶ ನಡೆಯಲಿದೆ.ಮತ್ತು ದಾವಣಗೆರೆಯಲ್ಲಿ ನಡೆಯುವ ಈ ಸಮಾವೇಶದಲ್ಲಿ ಮೂವತ್ತು ಲಕ್ಷ ಜನ ಭಾಗವಹಿಸಲಿದ್ದಾರೆ.
ಇವತ್ತು ಕರ್ನಾಟಕದ ಜನಸಂಖ್ಯೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ದಲಿತರು ಇದುವರೆಗೆ ಒಂದು ಬಾರಿಯೂ ಸಿಎಂ ಆಗಿಲ್ಲ.ಈ ಹಿಂದೆ ದಲಿತರು ಸಿಎಂ ಹುದ್ದೆಗೆ ಹತ್ತಿರವಾದಾಗಲೆಲ್ಲ ವ್ಯವಸ್ಥಿತವಾಗಿ ಅವರನ್ನು ಹಿಂದೆ ತಳ್ಳಲಾಗಿದೆ.ಆದರೆ ಈಗ ಅದಕ್ಕೆ ಅವಕಾಶ ನೀಡಬಾರದು ಎಂದರೆ ನಾವು ಸಂಘಟಿತರಾಗಿ ಬಲ ಪ್ರದರ್ಶಿಸಬೇಕು.ಆ‌ ಮೂಲಕ ದಿಲ್ಲಿ ನಾಯಕರಿಗೆ ಸೂಕ್ತ ಸಂದೇಶ ರವಾನಿಸಬೇಕು’
ಹೀಗೆ ಹೇಳಿದ ಆ ಪವರ್ ಫುಲ್ ನಾಯಕರು:’ಭವಿಷ್ಯದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವಾದರೆ‌ ಇಲ್ಲಿ ದಲಿತ ಸಮುದಾಯದ ನಾಯಕರು ಸಿಎಂ ಅಗಬೇಕು.ಅದು ಮಲ್ಲಿಕಾರ್ಜುನ ಖರ್ಗೆಯವರೇ ಇರಲಿ.ಅಥವಾ ಡಾ.ಜಿ.ಪರಮೇಶ್ವರ್ ಅವರೇ ಇರಲಿ’ ಎನ್ನುತ್ತಿದ್ದರು.
ಅಲ್ಲಿಗೆ ಕರ್ನಾಟಕದ ರಾಜಕಾರಣದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಏಳುವುದಷ್ಟೇ ಅಲ್ಲ,ಈ ವಿಷಯದಲ್ಲಿ ದಲಿತ ನಾಯಕರು ಅಗ್ರೆಸಿವ್ ಆಗಿದ್ದಾರೆ ಎಂಬುದನ್ನು ಪುಷ್ಟೀಕರಿಸುತ್ತದೆ.)
ಬಸವಲಿಂಗಪ್ಪ ಹಿಂದೆ
ಸರಿದಿದ್ದರು
———————-
ಅಂದ ಹಾಗೆ ಕರ್ನಾಟಕದ ರಾಜಕಾರಣದಲ್ಲಿ ದಲಿತ ಸಿಎಂ ಕೂಗು ಕೇಳುತ್ತಿರುವುದು ಹೊಸತಲ್ಲ.ಈ ಹಿಂದೆ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ದಲಿತ ನಾಯಕ ಬಿ.ಬಸವಲಿಂಗಪ್ಪ ಅವರ ಹೆಸರು ಮುಂಚೂಣಿಗೆ ಬರತೊಡಗಿತ್ತು.
ಅವತ್ತು ಅರಸರ ಸಂಪುಟದಲ್ಲಿ ಸಚಿವರಾಗಿದ್ದ ಬಸವಲಿಂಗಪ್ಪನವರು ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಕಾಯ್ದೆ ರೂಪಿಸಿದಾಗ ಬರೀ ಕರ್ನಾಟಕ ಮಾತ್ರವಲ್ಲ,ಇಡೀ ದೇಶವೇ ನಿಬ್ಬೆರಗಾಗಿ ನೋಡಿತ್ತು.
ಇದೇ ರೀತಿ ಆಡಳಿತಾತ್ಮಕವಾಗಿ ಅತ್ಯಂತ ಬಿಗುವಾಗಿದ್ದ‌,ಹಲವು ಸುಧಾರಣೆಗಳನ್ನು ಜಾರಿಗೆ ತಂದ ಬಸವಲಿಂಗಪ್ಪನವರು ಅವತ್ತಿನ ರಾಜಕಾರಣದಲ್ಲಿ ರೋಲ್ ಮಾಡಲ್ ಆಗಿ ಕಾಣಿಸಿಕೊಂಡಿದ್ದರು.
ಪರಿಣಾಮ?ದೇವರಾಜ ಅರಸರ ನಂತರ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೆ ಬಸವಲಿಂಗಪ್ಪ ಅತ್ಯುತ್ತಮ ಆಯ್ಕೆಯಾಗಬಲ್ಲರು ಎಂಬ ಲೆಕ್ಕಾಚಾರ ದಿಲ್ಲಿಯ ಕಾಂಗ್ರೆಸ್ ವರಿಷ್ಟರಲ್ಲಿ ಮೂಡಿತ್ತು.ಮತ್ತು ದಿಲ್ಲಿಯ ವರಿಷ್ಟರಲ್ಲಿದ್ದ ಈ ಲೆಕ್ಕಾಚಾರ ರಾಜ್ಯದ ಹಲವು ಕಾಂಗ್ರೆಸ್ ನಾಯಕರಿಗೂ ಗೊತ್ತಿತ್ತು.
ಹೀಗಾಗಿ ಮುಂದೆ ಬಸವಲಿಂಗಪ್ಪನರು ಬೂಸಾ ವಿವಾದದಲ್ಲಿ ಸಿಲುಕಿದಾಗ,ಬಸವಲಿಂಗಪ್ಪ ಅವರ ವಿರುದ್ಧದ ಹೋರಾಟಕ್ಕೆ ಕೆಲ ನಾಯಕರು ತೆರೆಯ ಹಿಂದೆ ಬಲ ತುಂಬಿದ್ದರು.
ಈ ಬೆಳವಣಿಗೆಯ ನಂತರ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಬಸವಲಿಂಗಪ್ಪ ಅವರ ಶಕ್ತಿ ಕುಗ್ಗುತ್ತಾ ಹೋಯಿತು.ಮುಂದೆ ಅರಸರು ಸಿಎಂ ಹುದ್ದೆಯಿಂದ ಕೆಳಗಿಳಿಯುವ ವೇಳೆಗೆ ಬಸವಲಿಂಗಪ್ಪ ರೇಸಿಗೆ ಬರುವ ಸ್ಥಿತಿಯಲ್ಲಿರಲಿಲ್ಲ.
ರೇಸಿನಲ್ಲಿದ್ದರು
ಬಿ.ರಾಚಯ್ಯ
——————-
ಇನ್ನು ಟೆಲಿಫೋನ್ ಕದ್ದಾಲಿಕೆಯ ಆರೋಪಕ್ಕೆ ಗುರಿಯಾದ ರಾಮಕೃಷ್ಣ ಹೆಗಡೆ 1988 ರಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರಲ್ಲ?ಈ ಸಂದರ್ಭದಲ್ಲಿ ಶುರುವಾದ ಸಿಎಂ ಹುದ್ದೆಯ ರೇಸಿನಲ್ಲಿ ದಲಿತ ನಾಯಕ ಬಿ.ರಾಚಯ್ಯ ಕಾಣಿಸಿಕೊಂಡಿದ್ದರು.
ಅವತ್ತು ರಾಮಕೃಷ್ಣ ಹೆಗಡೆ ಅವರಿಗೆ ಪರಮಾಪ್ತರಾಗಿದ್ದ ರಾಚಯ್ಯ ಅವರಿಗೆ ಸಹಜವಾಗಿಯೇ ಗೆಲುವಿನ ನಿರೀಕ್ಷೆ ಇತ್ತು,
ಯಾಕೆಂದರೆ,ಶಾಸಕಾಂಗ ಪಕ್ಷದಲ್ಲಿ ಅತ್ಯಂತ ಹೆಚ್ಚು ಶಾಸಕರು ಹೆಗಡೆ ಅವರ ಬೆಂಬಲಿಗರಾಗಿದ್ದರಿಂದ,ಅವರು ತಮ್ಮ ಜತೆ ನಿಲ್ಲುತ್ತಾರೆ ಎಂಬ ನಿರೀಕ್ಷೆ ರಾಚಯ್ಯ ಅವರಿಗಿತ್ತು.
ಹೀಗಾಗಿ ಕಣದಲ್ಲಿದ್ದ ಒಕ್ಕಲಿಗ ನಾಯಕ ಹೆಚ್.ಡಿ.ದೇವೇಗೌಡ,ಲಿಂಗಾಯತ ನಾಯಕ ಎಸ್.ಅರ್.ಬೊಮ್ಮಾಯಿ ಅವರಿಗಿಂತ ಹೆಚ್ಚು ಮತ ಗಳಿಸುವ ನಿರೀಕ್ಷೆ ಬಿ.ರಾಚಯ್ಯ ಅವರಿಗಿತ್ತು.
ಆದರೆ ಸ್ಪರ್ಧೆ ನಡೆದು ಫಲಿತಾಂಶ ಹೊರಬಂದಾಗ ಎಸ್.ಆರ್.ಬೊಮ್ಮಾಯಿ ಅವರು ಗೆದ್ದಿದ್ದರು.
ಅರ್ಥಾತ್,ಹೆಗಡೆಯವರು ಕೆಳಗಿಳಿದ ನಂತರ ಅವರ ಜಾಗದಲ್ಲಿ ಲಿಂಗಾಯತ ನಾಯಕರೊಬ್ಬರನ್ನು ನೋಡಲು ಅವರ ಬೆಂಬಲಿಗರು ಬಯಸಿದ್ದರು.ಮತ್ತದರ ಲಾಭ ಬೊಮ್ಮಾಯಿ ಅವರಿಗೆ ಸಿಕ್ಕಿತ್ತು.
ರಂಗನಾಥ್
ವಂಚಿತರಾಗಿದ್ದು ಹೇಗೆ?
————————–
ಮುಂದೆ ಕರ್ನಾಟಕದಲ್ಲಿ ಸಿಎಂ ಹುದ್ದೆಯ ರೇಸಿಗೆ ಬಂದ ದಲಿತ ನಾಯಕರೆಂದರೆ ಕೆ.ಹೆಚ್.ರಂಗನಾಥ್.ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಅವರು,ಆಡಳಿತದ ಬೇರುಗಳು ವ್ಯವಸ್ಥೆಯನ್ನು ಬಲಪಡಿಸಲು ಹೇಗೆ ನೆರವಾಗಬೇಕು?ಅಂತ ಅಸಂಖ್ಯಾತ ನಾಯಕರಿಗೆ ಪಾಠ ಹೇಳಿಕೊಟ್ಟರು.
ಇಂತಹ ಅತ್ಯುತ್ತಮ ನಾಯಕ ಕೆ.ಹೆಚ್.ರಂಗನಾಥ್ ಅವರಿಗೆ ಒಂದು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಬಂದಿತ್ತು.1992 ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರಲ್ಲ?ಆ ಸಂದರ್ಭದಲ್ಲಿ ಭವಿಷ್ಯದ ನಾಯಕನ ಸ್ಥಾನಕ್ಕೆ‌ ಪೈಪೋಟಿ ಶುರುವಾದಾಗ ಒಕ್ಕಲಿಗ ನಾಯಕ ಎಸ್.ಎಂ.ಕೃಷ್ಣ,ಲಿಂಗಾಯತ ನಾಯಕ ಎಂ.ರಾಜಶೇಖರಮೂರ್ತಿ ಮತ್ತು ದಲಿತ ನಾಯಕ ಕೆ.ಹೆಚ್.ರಂಗನಾಥ್ ಅವರ ಹಸರುಗಳು ರೇಸಿನಲ್ಲಿ ಕಾಣಿಸಿಕೊಂಡಿದ್ದವು.
ಈ ಪೈಕಿ ಎಸ್.ಎಂ.ಕೃಷ್ಣ ಅವರು ಶಾಸಕರ ಒಂದು ದೊಡ್ಡ ಗುಂಪಿನ ಬೆಂಬಲ ಹೊಂದಿದ್ದರೆ,1990 ರಲ್ಲಿ ನಡೆದ ವೀರೇಂದ್ರ ಪಾಟೀಲರ ಪದಚ್ಯುತಿ ಪರ್ವದಿಂದ ಕುದಿಯುತ್ತಿದ್ದ ಬಹುತೇಕ ಲಿಂಗಾಯತ ಶಾಸಕರು ಎಂ.ರಾಜಶೇಖರ ಮೂರ್ತಿ ಅವರ ಪರವಾಗಿ ನಿಂತಿದ್ದರು.
ಈ ಮಧ್ಯೆ ಶೋಷಿತ ವರ್ಗಗಳ ಶಾಸಕರು ಸೇರಿದಂತೆ ಹಲವರು ದಲಿತ ನಾಯಕರಾದ ಕೆ.ಹೆಚ್.ರಂಗನಾಥ್ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ಬಯಸಿದ್ದರು.
ಆದರೆ ನಾಯಕನ ಆಯ್ಕೆಯ ಸಂದರ್ಭ ಬಂದಾಗ ದಿಲ್ಲಿಯಿಂದ ಬಂದ ಕಾಂಗ್ರೆಸ್ ವೀಕ್ಷಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಲಕೋಟೆ ಬಿಚ್ಚಿದರು.ಹೀಗೆ ಬಿಚ್ಚಿದ ಲಕೋಟೆಯಲ್ಲಿ ಎಂ.ವೀರಪ್ಪ ಮೊಯ್ಲಿಯವರ ಹೆಸರಿತ್ತು.
ಹೀಗೆ ವರಿಷ್ಟರ ಕೃಪೆಗೆ ಪಾತ್ರರಾದ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾದ ನಂತರ ಹಿಂದಕ್ಕೆ ಸರಿದ ಕೆ.ಹೆಚ್.ರಂಗನಾಥ್ ಅವರ ಹೆಸರು‌ ಮುಂದೆ ಸಿಎಂ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಳ್ಳಲೇ ಇಲ್ಲ.
ಎರಡು ಬಾರಿ
ವಂಚಿತರಾದ ಖರ್ಗೆ
———————
ಇನ್ನು ಎಐಸಿಸಿ ಅಧ್ಯಕ್ಷರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಬಾರಿ ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದಿದ್ದರು.1999 ರಲ್ಲಿ ಮೊದಲ ಸಲ ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಬಿದ್ದ ಮಲ್ಲಿಕಾರ್ಜುನ ಖರ್ಗೆಯವರು,2008 ರಲ್ಲಿ ಮತ್ತೊಮ್ಮೆ‌ ಹಿಂದೆ ಸರಿದಿದ್ದರು.
1994 ರಲ್ಲಿ ಜನತಾದಳ ಸರ್ಕಾರ ಅಸ್ತಿತ್ವಕ್ಕೆ ಬಂತಲ್ಲ?ಈ ಸಂದರ್ಭದಲ್ಲಿ ವಿಧಾನಸಭೆಯ‌ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಸರ್ಕಾರದ ವಿರುದ್ದ‌ ನಿರಂತರ ಹೋರಾಟಗಳನ್ನು ಸಂಘಟಿಸಿದ್ದಲ್ಲದೆ,ಏಕಕಾಲಕ್ಕೆ‌ ಸದನದ ಒಳಗೆ‌ ಮತ್ತು ಹೊರಗೆ ಹೋರಾಟ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಬಲ‌ ತುಂಬಿದ್ದರು.
ಆದರೆ 1999 ರ ವಿಧಾನಸಭೆ ಚುನಾವಣೆ‌ ಹತ್ತಿರ ಬಂದಾಗ ಪಕ್ಷದ ವರಿಷ್ಟರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಎಸ್.ಎಂ.ಕೃಷ್ಣ ಅವರನ್ನು‌ ಕೂರಿಸಿದ್ದಲ್ಲದೆ ಒಕ್ಕಲಿಗ ಪ್ಲಸ್ ಅಹಿಂದ ವರ್ಗಗಳ ಬಲದೊಂದಿಗೆ ಅಧಿಕಾರಕ್ಕೆ ಬಂದೆವು ಎಂಬ ನಿರ್ಣಯದೊಂದಿಗೆ ಅವರನ್ನೇ ಸಿಎಂ ಹುದ್ದೆಯ ಮೇಲೆ ಕೂರಿಸಿದರು.ಈ ಬೆಳವಣಿಗೆಯಿಂದ ಖರ್ಗೆ ನಿರಾಶರಾದರೂ ಪಕ್ಷದ ವರಿಷ್ಟರ ವಿರುದ್ಧ‌ ಗುಟುರು‌ ಹಾಕಲಿಲ್ಲ.
ಮುಂದೆ 2008 ರ ವಿಧಾನಸಭಾ ಚುನಾವಣೆ ನಡೆಯಿತಲ್ಲ?ಈ ಸಂದರ್ಭದಲ್ಲಿ ನೂರಾ ಹತ್ತು ಕ್ಷೇತ್ರಗಳಲ್ಲಿ ಗೆಲುವು ಗಳಿಸುವುದರೊಂದಿಗೆ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತ್ತಾದರೂ ಕಾಂಗ್ರೆಸ್,ಜೆಡಿಎಸ್ ಮತ್ತು ಪಕ್ಷೇತರರ ಬಲ ಸೇರಿದರೆ 114 ರಷ್ಟಿತ್ತು.
ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಟರಾದ ಹೆಚ್.ಡಿ.ದೇವೇಗೌಡರು‌ ಕಾಂಗ್ರೆಸ್ ನಾಯಕರಿಗೆ ಒಂದು ಸಂದೇಶ ರವಾನಿಸಿ:ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸೋಣ ಎಂಬ ಪ್ರಪೋಸಲ್ ಇಟ್ಟರು.
ಆದರೆ ದೇವೇಗೌಡರ ಪ್ರಪೋಸಲ್ಲನ್ನು ಕಾಂಗ್ರೆಸ್ ನ ಸರ್ವೋಚ್ಚ ನಾಯಕಿ ಸೋನಿಯಾಗಾಂಧಿ ಒಪ್ಪಲಿಲ್ಲ.ಕಾರಣ?2004 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರವನ್ನು ಉರುಳಿಸಲು ದೇವೇಗೌಡರ ತಂತ್ರವೇ ಕಾರಣ.ಅವರನ್ನು ಪುನ: ನಂಬುವುದು ತಪ್ಪು ಅಂತ ರಾಜ್ಯದ ಕೆಲ ನಾಯಕರು ಅವರ ಕಿವಿಗೆ ತುಂಬಿದ್ದರು.ಪರಿಣಾಮ?ಸಿಎಂ ಹುದ್ದೆಗೆ ಕೇಳಿ ಬಂದಿದ್ದ ಖರ್ಗೆಯವರ ಹೆಸರು ಹಿಂದೆ ಸರಿಯಿತು.
ಪರಮೇಶ್ವರ್ ಲಕ್ಕು
ಕುದುರಲಿಲ್ಲ
———————–
ಇನ್ನು 2004 ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತಲ್ಲ?ಅ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಕೈ ಜೋಡಿಸಿ ಸರ್ಕಾರ ರಚಿಸಲು ತೀರ್ಮಾನಿಸಿದವು.
ಈ ಸಂದರ್ಭದಲ್ಲಿ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಶುರುವಾದಾಗ ಜೆಡಿಎಸ್ ವರಿಷ್ಟ ದೇವೇಗೌಡರ ಕಣ್ಣು ಕಾಂಗ್ರೆಸ್ಸಿನ ಡಾ.ಜಿ.ಪರಮೇಶ್ವರ್ ಅವರ ಮೇಲೆ ಬಿತ್ತು.ಹಾಗಂತಲೇ ಪರಮೇಶ್ವರ್ ಅವರಿಗೆ ಸಂದೇಶ ನೀಡಿದ ಅವರು:’ನೀವು ಸಿಎಂ ಆಗಲು ನಮ್ಮ ಒಪ್ಪಿಗೆಯಿದೆ.ಹೀಗಾಗಿ ನಿಮ್ಮ ಪಕ್ಷದ ವರಿಷ್ಟರ ಜತೆ ನೀವು ಮಾತನಾಡಬಹುದು’ಎಂದಿದ್ದರು.
ಆದರೆ ಈ ವಿಷಯ ತಿಳಿಯುತ್ತಲೇ ಸರ್ವಪಕ್ಷದವರಿಗೆ ಆಪ್ತರಾಗಿರುವ ನಾಯಕರೊಬ್ಬರು ದೇವೇಗೌಡರ ಜತೆ ಮಾತನಾಡಿ ಈ ತೀರ್ಮಾನ ಬದಲಾಗುವಂತೆ ನೋಡಿಕೊಂಡರು.
ಅವತ್ತು ಅವರು:’ಸಾರ್,ಇವತ್ತು ದಲಿತ ನಾಯಕರೊಬ್ಬರನ್ನು ಸಿಎಂ ಮಾಡಿದರೆ ಇನ್ನೈದು ವರ್ಷ ಕಾಲ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ.ಹಾಗೇನಾದರೂ ಮಾಡಲು ಹೋದರೆ ನಿಮಗೆ ದಲಿತ ವಿರೋಧಿ ಹಣೆ ಪಟ್ಟಿ ತಗಲುತ್ತದೆ’ ಎಂದರು.ಅಷ್ಟೇ ಅಲ್ಲ,’ಮೈತ್ರಿಕೂಟ ಸರ್ಕಾರ ನಿಮ್ಮಿಚ್ಚೆಯಂತೆ ನಡೆಯಬೇಕೆಂದರೆ ಧರ್ಮಸಿಂಗ್ ಅವರನ್ನು ಸಿಎಂ ಮಾಡಿಸಿ.ನಾಳೆ ನೀವು ಅವರನ್ನು ಇಳಿಸಿದರೂ ಸಮಸ್ಯೆ ಇಲ್ಲ’ ಎಂದು ಸಲಹೆ ನೀಡಿದರು.
ಅವತ್ತು ಈ ಆಪ್ತರು ನೀಡಿದ ಸಲಹೆ ದೇವೇಗೌಡರಿಗೂ‌ ಇಷ್ಟವಾಯಿತು.ರಜಪೂತ ಸಮುದಾಯದ ನಾಯಕ ಧರ್ಮಸಿಂಗ್ ಪಟ್ಟಕ್ಕೇರುವಂತೆ ಮಾಡಿತು.ಆದರೆ ಅದೇ ಕಾಲಕ್ಕೆ ದಲಿತ ನಾಯಕ ಡಾ.ಜಿ.ಪರಮೇಶ್ವರ್ ನಿರಾಶರಾಗುವಂತೆ ಮಾಡಿತು.
ಈಗ ಪುನ: ಕರ್ನಾಟಕದ ನೆಲೆಯಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಮೇಲೆದ್ದಿದೆ.ಹಾಲಿ ಸಿಎಂ ಸಿದ್ದರಾಮಯ್ಯ ಅವರ ಜಾಗಕ್ಕೆ ಯಾವ ದಕ್ಕೆಯೂ ಬಾರದಿದ್ದರೆ ಈ ಕೂಗು ತೆರೆಯ ಹಿಂದೆ ಸರಿಯಲಿದೆ.ಇಲ್ಲದಿದ್ದರೆ ಹಿಂದೆಂದಿಗಿಂತ ಪ್ರಬಲವಾಗಿ ಮೇಲೇಳಲಿದೆ.ಹಾಗಾಗುತ್ತದಾ?ಎಂಬುದನ್ನು ಕಾದು ನೋಡಬೇಕು.
ಆರ್.ಟಿ.ವಿಠ್ಠಲಮೂರ್ತಿ

Spread the love

About Laxminews 24x7

Check Also

ಅತೀ ಶೀಘ್ರದಲ್ಲೇ ನಾವು ಬರ್ತಿದ್ದೇವೆ ಎಂದ ಆಪಲ್​!

Spread the love Bengaluru: ಇನ್ನು ಕೆಲವೇ ದಿನಗಳಲ್ಲಿ ಐಫೋನ್​ 17 ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದಕ್ಕೂ ಮುನ್ನ ಆಪಲ್​ ಕರ್ನಾಟಕ ರಾಜ್ಯಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ