ಚಾಮರಾಜನಗರ: ವರನಟ ದಿ.ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ(94) ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ನಾಗಮ್ಮ ಅಣ್ಣಾವ್ರ ಅಚ್ಚುಮೆಚ್ಚಿನ ಸಹೋದರಿಯಾಗಿದ್ದರು. ಜೊತೆಗೆ, ಇಡೀ ರಾಜ್ ಪರಿವಾರಕ್ಕೆ ಅಕ್ಕರೆಯ ನಾಗಮ್ಮತ್ತೆಯಾಗಿದ್ದರು.
ಅಣ್ಣಾವ್ರು ಅಂದಿನ ಮದ್ರಾಸ್ನಲ್ಲಿದ್ದಾಗ ನಾಗಮ್ಮ ಮಕ್ಕಳ ಲಾಲನೆ-ಪಾಲನೆ ಮಾಡುತ್ತಿದ್ದರು. ತಂಗಿ ಹಾಗೂ ಕುಟುಂಬದ ಜೊತೆ ವಿರಾಮದ ಕಾಲ ಕಳೆಯಬೇಕೆಂದು ಅಣ್ಣಾವ್ರು ಗಾಜನೂರಿನಲ್ಲಿ ಮನೆಯನ್ನೂ ಕಟ್ಟಿಸಿದ್ದರು. ಅಷ್ಟರಲ್ಲಿ, ವೀರಪ್ಪನ್ನಿಂದ ಅಪಹರಣಕ್ಕೊಳಗಾದ ಬಳಿಕ ಅನಿವಾರ್ಯವಾಗಿ ಗಾಜನೂರಿನಲ್ಲಿ ನೆಲೆ ನಿಲ್ಲುವ ಆಸೆ ಕೈಬಿಟ್ಟಿದ್ದರು.ಪುನೀತ್ ರಾಜ್ ಕುಮಾರ್ ಅವರನ್ನು ಕಂಡರೆ ನಾಗಮ್ಮಗೆ ಎಲ್ಲಿಲ್ಲದ ಅಕ್ಕರೆ. ತಾನು ಎತ್ತಿ ಆಡಿಸಿದ ಅಪ್ಪುವನ್ನು ಕಂಡಾಗ ಮನತುಂಬಿ ಮುತ್ತು ಕೊಟ್ಟು ಹರಸುತ್ತಿದ್ದರು. ಪುನೀತ್ ನಿಧನದ ಸುದ್ದಿಯನ್ನು ಇದುವರೆಗೂ ನಾಗಮ್ಮರಿಗೆ ಹೇಳದೇ ಗೌಪ್ಯತೆ ಕಾಪಾಡಲಾಗಿತ್ತು. ಕಳೆದ ಮಾರ್ಚ್‌ನಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿ, ಬಹಳ ದಿನವಾಯ್ತು ನೋಡಲು ಬಾ ಕಂದಾ ಎಂದು ಕರೆದಿದ್ದ ವಿಡಿಯೋ ವೈರಲ್ ಆಗಿತ್ತು.
ನಾಗಮ್ಮರಿಗೆ ಒಟ್ಟು 8 ಜನ ಮಕ್ಕಳು. ಐವರು ಪುತ್ರರು, ಮೂವರು ಪುತ್ರಿಯರು. ಹಿರಿಮಗ ಗೋಪಾಲ್ ಜೊತೆ ನಾಗಮ್ಮ ಗಾಜನೂರಿನಲ್ಲಿ ವಾಸವಿದ್ದರು. ಕಳೆದ 20 ದಿನದ ಹಿಂದಷ್ಟೇ ಚೆನ್ನೈನಲ್ಲಿ ವಾಸವಿದ್ದ ಪುತ್ರ ಭರತ್ ರಾಜ್ ಅನಾರೋಗ್ಯದಿಂದ ನಿಧನರಾಗಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಮಗನ ಸಾವಿನ ಸುದ್ದಿಯನ್ನೂ ಕೂಡ ತಿಳಿಸಿರಲಿಲ್ಲ.
ಅಣ್ಣಾವ್ರ ಕುಟುಂಬಕ್ಕಷ್ಟೇ ಅಲ್ಲದೇ ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ ಅಪ್ಪು ನಿಧನದ ಸುದ್ದಿಯನ್ನು ಕುಟುಂಬಸ್ಥರು ಗೌಪ್ಯವಾಗಿಟ್ಟಿದ್ದರು. ಮನೆಗೆ ಯಾರೇ ಬಂದರೂ ನಾಗಮ್ಮ ಅವರ ಬಳಿ ಅಪ್ಪು ವಿಚಾರ ಮಾತನಾಡಬೇಡಿ ಎಂದು ಮನವಿ ಮಾಡುತ್ತಿದ್ದರು.