Breaking News

ಬೆಳಗಾವಿಯಿಂದ ರೈಲು ಪ್ರಯಾಣಿಕರ ಸಂಖ್ಯೆ ಶೇ.20ರಷ್ಟು ಏರಿಕೆ:

Spread the love

ಬೆಳಗಾವಿ: ದ್ವಿಪಥ​​​​​​​, ವಿದ್ಯುತ್‌ಚಾಲಿತ ಇಂಜಿನ್​​, ರೈಲ್ವೆ ನಿಲ್ದಾಣದ ಆಧುನೀಕರಣ ಸೇರಿ ಮತ್ತಿತರ ಕಾರಣಗಳಿಂದ ಬೆಳಗಾವಿಯಿಂದ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಅಧಿಕವಾಗಿದೆ.

ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ರೈಲ್ವೆ ಸೇವೆ ಸಿಗುತ್ತದೆ. ಇದರಿಂದಾಗಿ ಅತೀ ಹೆಚ್ಚು ಜನರು ರೈಲನ್ನೇ ಅವಲಂಬಿಸಿದ್ದಾರೆ. ಈ ಮೊದಲು ಸಿಂಗಲ್ ಲೈನ್ ಮತ್ತು ವಿದ್ಯುತ್‌ಚಾಲಿತ ಇಂಜಿನ್ ಇಲ್ಲದಿದ್ದುದರಿಂದ ಪ್ರಯಾಣಿಕರು ತಮ್ಮ ಸ್ಥಳ ತಲುಪಲು ಸಾಕಷ್ಟು ವಿಳಂಬವಾಗುತ್ತಿತ್ತು. ಆದರೆ, ಈಗ ಎರಡೂ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರಿನಿಂದ ಮಿರಜ್​ವರೆಗೆ ದ್ವಿಪಥ ನಿರ್ಮಾಣ ಮಾಡಲಾಗಿದೆ. ವಿದ್ಯುತ್‌ಚಾಲಿತ ಇಂಜಿನ್ ಬಳಸಲಾಗುತ್ತಿದೆ. ಕ್ರಾಸಿಂಗ್ ಸಮಸ್ಯೆ ಇಲ್ಲದೇ ಸರಿಯಾದ ಸಮಯಕ್ಕೆ ರೈಲು ತಲುಪುತ್ತಿದೆ.

ರೈಲು ನಿಲ್ದಾಣದಲ್ಲಿ ಸ್ವಚ್ಛತೆ, ನಿರೀಕ್ಷಣಾ ಕೊಠಡಿಗಳು, ವೈಫೈ, ಕುಳಿತುಕೊಳ್ಳಲು ಒಳ್ಳೆಯ ಆಸನ, ಪಬ್ಲಿಕ್ ಅನೌನ್ಸ್‌ಮೆಂಟ್ ಸೇರಿ ಎಲ್ಲ ರೀತಿ ವ್ಯವಸ್ಥೆ ಇರುವುದರಿಂದ ಜನ ಹೆಚ್ಚು ರೈಲು ಪ್ರಯಾಣದೆಡೆ ಮುಖ ಮಾಡುತ್ತಿದ್ದಾರೆ. ರೈಲ್ವೆ ಆ್ಯಪ್‌ಗಳಿಂದ ರೈಲು ಬರುವುದು, ಹೊರಡುವ ಸಮಯ, ಎಲ್ಲಿದೆ ಎಂಬ ನಿಖರ ಮಾಹಿತಿ ಲಭ್ಯವಾಗುತ್ತಿದೆ.

BELAGAVI  ರೈಲ್ವೆ ಪ್ರಯಾಣಿಕರ ಸಂಖ್ಯೆ ಏರಿಕೆ  RAILWAY SYSTEM IN BELAGAVI  UTS ಆ್ಯಪ್

ಬೆಳಗಾವಿಯಿಂದ ರೈಲ್ವೆ ಪ್ರಯಾಣಿಕರ ಸಂಖ್ಯೆ ಶೇ.20ರಷ್ಟು ಏರಿಕೆ (ETV Bharat)

UTS ಆ್ಯಪ್ ಮೂಲಕ ಕ್ಯೂನಲ್ಲಿ ನಿಲ್ಲದೇ ಕಾಯ್ದಿರಿಸದ ಟಿಕೆಟ್ ಪಡೆಯಲು ಸುಲಭವಾಗಿದೆ. ಹೊಸದಾಗಿ ಎಲ್.ಎಚ್.ಬಿ. ಕೋಚ್​ ಅಳವಡಿಸಲಾಗಿದೆ. ರೈಲಿನಲ್ಲಿ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಿ, ಒಳ್ಳೆಯ ವಾತಾವರಣ ನಿರ್ಮಿಸಲಾಗಿದೆ. ಈ ಎಲ್ಲದರ ಪರಿಣಾಮ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು.

ಕಾಯ್ದಿರಿಸದ ಪ್ರಯಾಣಿಕರ ಸಂಖ್ಯೆ(ಏಪ್ರಿಲ್​)

2023: 98,969
2024-25: 1,12,872
2025: 1,39,562

ಕಾಯ್ದಿರಿಸದ ಪ್ರಯಾಣಿಕರ ಸಂಖ್ಯೆ (ಮೇ)

2023: 1,22,44
2024: 1,21,976
2025: 1,52,007

ಕಾಯ್ದಿರಿಸಿದ ಪ್ರಯಾಣಿಕರ ಸಂಖ್ಯೆ(ಏಪ್ರೀಲ್ ತಿಂಗಳು)

2023: 55,288
2024: 57,929
2025: 71,649

ಕಾಯ್ದಿರಿಸಿದ ಪ್ರಯಾಣಿಕರ ಸಂಖ್ಯೆ(ಮೇ ತಿಂಗಳು)

2023: 56,119
2024: 63,907
2025: 63,040

ಇಷ್ಟೊಂದು ಸಂಖ್ಯೆಯಲ್ಲಿ ಬೆಳಗಾವಿಯಿಂದ ಜನರು ರೈಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ಬೆಳಗಾವಿಯಿಂದ ವಿವಿಧೆಡೆ ರೈಲುಗಳನ್ನು ಬಿಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ ರೈಲ್ವೆ ನಿಲ್ದಾಣದ ಮುಖ್ಯ ವಾಣಿಜ್ಯ ನಿರೀಕ್ಷಕ ಭೀಮಪ್ಪ ಮೇದಾರ ಈಟಿವಿ ಭಾರತ ಜೊತೆಗೆ ಮಾತನಾಡಿ, “ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಶೇ.15-20ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಬೆಳಗಾವಿ-ಬೆಂಗಳೂರು, ಬೆಳಗಾವಿ-ಮಿರಜ್ ಡಬಲ್​ ಲೈನ್​ ಆಗಿದೆ. ಜೊತೆಗೆ ವಿದ್ಯುತ್ ಚಾಲಿತ ಇಂಜಿನ್ ಬಳಕೆ ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ಒಳ್ಳೆಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ರೈಲ್ವೆ ನಿಲ್ದಾಣ ಮತ್ತು ರೈಲಿನಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿದೆ. ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರು, ಒಳ್ಳೆಯ ನಿರೀಕ್ಷಣಾ ಕೊಠಡಿಗಳು, ಆಸನಗಳನ್ನು ಅಳವಡಿಸಲಾಗಿದೆ. ಮೊದಲಿನಂತೆ ಸರದಿ ಸಾಲಿನಲ್ಲಿ ನಿಂತು ರೈಲು ಟಿಕೆಟ್ ಪಡೆಯುವುದು ಕಮ್ಮಿಯಾಗಿದೆ. UTS ಆ್ಯಪ್ ಮೂಲಕ ಕಾಯ್ದಿರಿಸಿದ ಮತ್ತು ಕಾಯ್ದಿರಿಸದ ಟಿಕೆಟ್ ಸುಲಭವಾಗಿ ಪಡೆಯಬಹುದಾಗಿದೆ. ಡಿಜಿಟಲ್ ಕ್ರಾಂತಿಯೂ ರೈಲು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದೆ” ಎಂದು ಹೇಳಿದರು.

ಮತ್ತಷ್ಟು ರೈಲುಗಳ ಬೇಡಿಕೆ: ನೈರುತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಪ್ರಸಾದ ಕುಲಕರ್ಣಿ ಮಾತನಾಡಿ, “ದಿನನಿತ್ಯ ಬೆಳಗಾವಿ ಮಾರ್ಗವಾಗಿ ಸುಮಾರು 30 ರೈಲುಗಳು ಹೊರಡುತ್ತವೆ. ಖಾಸಗಿ ಬಸ್​​ಗಳಲ್ಲಿ ದುಬಾರಿ ದರ ಇರುವ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಅತಿ ಹೆಚ್ಚು ಜನರು ಪ್ರಯಾಣ ಮಾಡುತ್ತಾರೆ. ಹಾಗಾಗಿ, ಮತ್ತಷ್ಟು ರೈಲುಗಳನ್ನು ಬಿಡುವ ಬೇಡಿಕೆ ಇದೆ. ಮನಗೂರು-ಹುಬ್ಬಳ್ಳಿ, ಮಂಗಳೂರು-ಹುಬ್ಬಳ್ಳಿ, ಕೋಚುವೆಳ್ಳಿ-ಹುಬ್ಬಳ್ಳಿ, ತಿರುಪತಿ-ಹುಬ್ಬಳ್ಳಿ ಈ ರೈಲುಗಳನ್ನು ಬೆಳಗಾವಿವರೆಗೆ ವಿಸ್ತರಿಸಬೇಕು. ಅದೇರೀತಿ ಹೊಸದಾಗಿ ಮಿರಜ-ಬೆಳಗಾವಿ-ಮಂಗಳೂರು, ಬೆಳಗಾವಿ-ಪುಣೆ-ದಾದರ್, ಬೆಳಗಾವಿ-ಶಿರಡಿ, ಬೆಳಗಾವಿ-ವಾಸ್ಕೋ ರೈಲುಗಳನ್ನು ಆರಂಭಿಸಬೇಕು. ರಾತ್ರಿ 9.30ರ ನಂತರ ಸೂಪರ್ ಫಾಸ್ಟ್ ಎಕ್ಸಪ್ರೆಸ್ ಬೆಳಗಾವಿ-ಮುಂಬೈ, ಬೆಳಗಾವಿ-ಹೈದರಾಬಾದ್ ಬಿಡಬೇಕು” ಎಂದರು.


Spread the love

About Laxminews 24x7

Check Also

ಸುಳೇಬಾವಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆರಂಭ

Spread the loveಬೆಳಗಾವಿ : ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಸುಳೇಬಾವಿಯ ಮಹಾಲಕ್ಷ್ಮೀ ಮೈದಾನದಲ್ಲಿ ಭಾನುವಾರ ಆರಂಭವಾಗಿದ್ದು, 8 ತಂಡಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ