ಕಲಬುರಗಿ: ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಏಳು ಮನೆಗಳಲ್ಲಿ ಕಳ್ಳತನ ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತನನ್ನು ಹೈದರಾಬಾದ್ ನಿವಾಸಿ ಸೈಯದ್ ಹಮೀದ್ (47) ಎಂದು ಗುರುತಿಸಲಾಗಿದೆ. ಈತನಿಂದ 123 ಗ್ರಾಂ ಚಿನ್ನದ ಆಭರಣ ಸೇರಿ ಅಂದಾಜು 11.07 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
2025ರ ಜೂನ್ 23ರಂದು ಶಹಾಬಾದ್ ರಸ್ತೆಯ ಕಲ್ಯಾಣ ನಗರದಲ್ಲಿರುವ ಶರಣಕುಮಾರ ನಾಗೇಂದ್ರ ಮಂಗನ್ ಎಂಬವರು ತಮ್ಮ ಮನೆಯಲ್ಲಿ ಹಾಡಹಗಲೇ 1.48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ವಿಶ್ವವಿದ್ಯಾಲಯ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ತಂಡ ರಚನೆ ಮಾಡಿ ತನಿಖೆ ಕೈಗೊಂಡಿದ್ದರು.
ಆರೋಪಿಯ ಚಲನವಲನ, ಬೈಕ್ನಲ್ಲಿ ಓಡಾಡುವ ದೃಶ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿದ್ದವು. ಇದರ ಆಧಾರದ ಮೇಲೆ ಕಳ್ಳನ ಬಂಧನಕ್ಕೆ ಜಾಲ ಬೀಸಲಾಗಿತ್ತು. ಆರೋಪಿ ಸೇಡಂ ರಸ್ತೆಯ ಹತ್ತಿರ ಅನುಮಾನಾಸ್ಪದವಾಗಿ ಒಂದು ಬ್ಯಾಗ್ ಹಿಡಿದು ನಿಂತಿದ್ದನ್ನು ಗಮನಿಸಿದ ಪೊಲೀಸರು, ಆತನನ್ನು ಕರೆತಂದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣಗಳ ಜಾಡು ಸಿಕ್ಕಿದೆ.
ಆರೋಪಿ ತನ್ನ ಬೈಕ್ನ್ನು ಗೂಡ್ಸ್ ರೈಲಿಗೆ ಲೋಡ್ ಮಾಡಿ, ತಾನೂ ಕೂಡ ರೈಲಿಗೆ ಹೈದರಾಬಾದ್ನಿಂದ ಕಲಬುರಗಿಗೆ ಬಂದು, ಒಂದೆರಡು ದಿನ ಇಲ್ಲಿ ವಿಶ್ರಾಂತಿ ಪಡೆದು, ಬಳಿಕ ಹಗಲು ಹೊತ್ತಿನಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ. ಕೆಲಸ ಮುಗಿದ ಮೇಲೆ ಬೈಕ್ಅನ್ನು ಗೂಡ್ಸ್ ರೈಲಿಗೆ ಹಾಕಿ ತಾನೂ ರೈಲಿನಲ್ಲಿ ತೆರಳುತ್ತಿದ್ದ. ಕಳೆದ ಐದು ಆರು ತಿಂಗಳಿಂದ ಈತನ ಚಟುವಟಿಕೆಗಳು ಹೆಚ್ಚಾಗಿದ್ದವು. ತೆಲಂಗಾಣದಲ್ಲಿ ಈತನ ವಿರುದ್ಧ ಈಗಾಗಲೇ 60ಕ್ಕೂ ಹೆಚ್ಚು ಕೇಸುಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
“ಈತ ಕಳ್ಳತನಕ್ಕೆ ಗುಲ್ಬರ್ಗ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ಸರಹದ್ದಿನಲ್ಲಿ, ನಗರದ ಹೊರಭಾಗದಲ್ಲಿರುವ ಮನೆಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ವಿವಿ ಠಾಣೆ ವ್ಯಾಪ್ತಿಯಲ್ಲಿಯೇ 7 ಮನೆಗಳಿಗೆ ಹಗಲು ಕನ್ನ ಹಾಕಿದ್ದ” ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾಹಿತಿ ನೀಡಿದ್ದಾರೆ.