ಹುಬ್ಬಳ್ಳಿ : ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್ಐ) ಹಾವು ಕಡಿತಕ್ಕೊಳಗಾದವರಿಗೆ ಸುಧಾರಿತ ಚಿಕಿತ್ಸಾ ಕ್ರಮವನ್ನು ಕಂಡುಹಿಡಿದಿದೆ. ಹಾವಿನ ವಿಷ ಅರಿತು ಚಿಕಿತ್ಸೆ ನೀಡುವ ಸಂಶೋಧನೆ ಮಾಡಲಾಗಿದ್ದು, ಇದು ದೇಶದಲ್ಲಿಯೇ ಪ್ರಥಮ ಸಂಶೋಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಕ್ತ ಪರಿಶೀಲಿಸಿ ಚಿಕಿತ್ಸೆ: ಹಾವು ಕಡಿತಕ್ಕೊಳಗಾಗಿ ಕೆಎಂಸಿಆರ್ಐಗೆ ಬರುವವರಲ್ಲಿ ಕೆಲವರು ಕಚ್ಚಿದ ಹಾವಿನೊಟ್ಟಿಗೆ ಬರುತ್ತಿದ್ದರು. ವೈದ್ಯರಿಗೆ ತಾವು ತಂದ ಹಾವು ನೀಡಿ ಗಾಬರಿ ಹುಟ್ಟಿಸುತ್ತಿದ್ದರು. ಈಗ ಹಾಗೇನಿಲ್ಲ, ಹಾವು ಕಡಿದ ವ್ಯಕ್ತಿಯಿಂದ ರಕ್ತ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ನೇರವಾಗಿ ಆ್ಯಂಟಿ ಸ್ನೇಕ್ ವೆನಮ್ಸ್ (ಎಎಸ್‌ವಿ) ಇಂಜೆಕ್ಷನ್ ಕೊಡಲಾಗುತ್ತಿತ್ತು. ಈಗ ಹಾವು ಕಡಿತದ ತೀವ್ರತೆ, ವಿಷದ ಪ್ರಮಾಣವನ್ನು ತಿಳಿದ ನಂತರ ಚಿಕಿತ್ಸೆ ನೀಡಲಾಗುತ್ತಿದೆ.
ಕೆಎಂಸಿಆರ್‌ಐನ ಬಹು ವಿಭಾಗೀಯ ಸಂಶೋಧನಾ ಘಟಕದಲ್ಲಿ (ಎಂಆರ್ಯು) ತಜ್ಞರ ತಂಡವಿದ್ದು, ಹಾವು ಕಡಿತಕ್ಕೊಳಗಾದವರು ನೇರವಾಗಿ ಇದೇ ಆಸ್ಪತ್ರೆಗೆ ಬಂದ ತಕ್ಷಣ ಅವರಿಂದ ರಕ್ತವನ್ನು ಪಡೆಯುತ್ತಾರೆ. ನಂತರ ಅದನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.
ಹಾವು ಕಡಿತದ ಜಾಗದಲ್ಲಿ ಬಾವು ಬರುವುದು, ಉಸಿರಾಟದ ಸಮಸ್ಯೆ, ರಕ್ತದೊತ್ತಡ, ಏರಿಳಿತ, ನರಮಂಡಲದಲ್ಲಿ ಉಂಟಾಗುವ ನ್ಯೂನತೆ, ರಕ್ತ ಹೆಪ್ಪುಗಟ್ಟುವುದನ್ನು ತಿಳಿದುಕೊಳ್ಳಲಾಗುತ್ತದೆ. ಹಾವಿನ ವಿಷದಲ್ಲಿರುವ ಕಿಣ್ವ ಅಂಶ ಪತ್ತೆ ಹಚ್ಚಲಾಗುತ್ತದೆ. ಎಲಿಸಾ ಯಂತ್ರದಿಂದ ಇದರ ಪ್ರಮಾಣ ಅಳೆಯಲಾಗುತ್ತದೆ. ನಂತರ ವೈದ್ಯರಿಗೆ ಎಎಸ್‌ವಿ ಇಂಜೆಕ್ಷನ್ ಕೊಡುವಂತೆ ಸೂಚಿಸಲಾಗುತ್ತದೆ.ರಕ್ತದಲ್ಲಿ ಕಿಣ್ವ ಅಂಶ ಹೆಚ್ಚು ಇದ್ದಷ್ಟು ಹಾವು ಕಡಿತಕ್ಕೊಳಗಾದವರು ಬದುಕುಳಿಯುವುದು ಕಡಿಮೆ. ಹೀಗಾಗಿ, ಇದರ ಬಗ್ಗೆ ಮೊದಲೇ ತಿಳಿಯುವುದರಿಂದ ಯಾವ ರೀತಿಯ ಚಿಕಿತ್ಸೆ ನೀಡಬಹುದೆಂಬುದು ಈ ಸಂಶೋಧನೆಯಿಂದ ಗೊತ್ತಾಗಲಿದೆ.