ಬೆಳಗಾವಿ/ರಾಯಚೂರು: ರಾಜ್ಯದ ವಿವಿಧೆಡೆ ಭಾನುವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಜಲಾನಯನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ 41 ಸೇತುವೆಗಳು ಮುಳುಗಡೆಯಾಗಿವೆ.
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಕೃಷ್ಣಾ ಪ್ರವಾಹದಲ್ಲಿ ಎರಡು ಸೇತುವೆಗಳು, ಒಂದು ಬ್ಯಾರೇಜ್ ಮುಳುಗಡೆಯಾಗಿದೆ. ಎಲೆಬಿಚ್ಚಾಲಿ ಗ್ರಾಮದಲ್ಲಿರುವ ರಾಯರ ಏಕಶಿಲಾ ವೃಂದಾವನ ಹಾಗೂ ಜಪದ ಕಟ್ಟೆ ತುಂಗಭದ್ರಾ ನದಿ ನೀರಿನಿಂದ ಜಲಾವೃತವಾಗಿವೆ. ರಾಯರ ವೃಂದಾವನಕ್ಕೆ ನೀರಿನಲ್ಲೇ ತೆರಳಿ ಅರ್ಚಕರು ಪೂಜೆ ಸಲ್ಲಿಸಿದರು. ನದಿ ದಂಡೆದಲ್ಲಿರುವ ಚಿಕ್ಕಮಂಚಾಲಿ ಗ್ರಾಮಸ್ಥರು ನೆರೆ ಭೀತಿಯಲ್ಲಿದ್ದಾರೆ.
ಮಂತ್ರಾಲಯದ ಸ್ನಾನಘಟ್ಟ ಮುಳುಗಿದೆ. ಗಂಗಮ್ಮದೇವಿ ದೇವಸ್ಥಾನದವರೆಗೂ ನೀರು ಬಂದಿದೆ. ಭಕ್ತರು ನದಿ ದಂಡೆಯಲ್ಲಿ ನೀರಿನಲ್ಲಿ ಮುಳುಗಿ ಪೂಜೆ ಸಲ್ಲಿಸಿದರು.