ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಬಿಎಂಟಿಸಿ ಉದ್ಯೋಗಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೋವಿಡ್-19 ಪರೀಕ್ಷೆಯ ರಿಪೋರ್ಟ್ ಪಾಸಿಟಿವ್ ಬರುತ್ತಿದ್ದಂತೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದರವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಲು ಆರಂಭಿಸಿದ್ದಾರೆ.
ಸೋಂಕಿತ ಬಿಎಂಟಿಸಿ ಉದ್ಯೋಗಿ ಮೂರು ದಿನಗಳ ರಜೆಯಲ್ಲಿದ್ದು, ಸ್ವಯಂ ಪ್ರೇರಿತವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದರು. ಜೂನ್ 10ರಂದು ಬಂದ ರಿಪೋರ್ಟ್ ನಲ್ಲಿ ಸೋಂಕು ತಗುಲಿರುವುದು ಖಚಿತವಾಗಿದೆ. ದೈನಂದಿನ ಕರ್ತವ್ಯಕ್ಕೆ ವರದಿ ಮಾಡುವಾಗ ಅವರಿಗೆ ಜ್ವರ ಅಥವಾ ಆರೋಗ್ಯ ಸಮಸ್ಯೆಯ ಯಾವುದೇ ಲಕ್ಷಣಗಳು ಇರಲಿಲ್ಲ ಎನ್ನಲಾಗಿದೆ.
ಬಿಎಂಟಿಸಿ ಉದ್ಯೋಗಿಯು ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ನಿಗದಿತ ಮಾನದಂಡಗಳ ಪ್ರಕಾರ ಕೆಲಸದ ಸ್ಥಳವನ್ನು ಸೋಂಕುರಹಿತ ಮತ್ತು ಸ್ವಚ್ಛಗೊಳಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮುಂದಿನ ಕ್ರಮಗಳನ್ನು ಪ್ರಾರಂಭಿಸಲಾಗುವುದು. ಸಂಸ್ಥೆ ನೌಕರರ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಬಿಎಂಟಿಸಿ ತಿಳಿಸಿದೆ.