ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಗ್ರಾಮದ ರೈತ ಬಸವಣ್ಣಿ ಚಿಣ್ಣಪ್ಪ ಮುಗಳಖೋಡ ಒಂದೇ ಬೆಳೆ ನೆಚ್ಚಿಕೊಳ್ಳದೆ, ವಿವಿಧ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯಲ್ಲಿ ಯಶ ಕಂಡಿದ್ದಾರೆ. ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಬಿ.ಎಸ್ಸಿ ಪದವೀಧರರಾದ ಬಸವಣ್ಣಿ 40 ಎಕರೆ ಜಮೀನು ಹೊಂದಿದ್ದಾರೆ.
ನೌಕರಿಗಾಗಿ ಬೆನ್ನು ಹತ್ತದೆ, ಒಕ್ಕಲುತನದಲ್ಲೇ ಖುಷಿ ಕಾಣುತ್ತಿದ್ದಾರೆ.
‘ನಾನು ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4 ಅಡಿ ಬಿಟ್ಟು, ಕಬ್ಬಿನ ಬೆಳೆ ನಾಟಿ ಮಾಡಿದ್ದೇನೆ. ಮಿಶ್ರ ಬೆಳೆಗಳಾಗಿ ಅರಿಸಿನ, ಗೋವಿನಜೋಳ, ಗೋಧಿ, ಸದಕ ಬೆಳೆಯುತ್ತಿದ್ದೇನೆ. ಒಂದು ತೆರೆದ ಬಾವಿ, ಮೂರು ಕೊಳವೆಬಾವಿ ಇವೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಕಡಿಮೆ ನೀರಿದ್ದರೂ, ಎಲ್ಲ ಬೆಳೆಗಳಿಗೂ ಸಮರ್ಪಕವಾಗಿ ಉಣಿಸಲು ಸಾಧ್ಯವಾಗಿದೆ’ ಎಂದು ಬಸವಣ್ಣಿ ಮುಗಳಖೋಡ ತಿಳಿಸಿದರು.