ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡಿನ ಜಿಲ್ಲೆಯ ಜನತೆ ಪ್ರತಿ ವರ್ಷ ಡಿಸೆಂಬರ್ ಬಂದರೆ ಸಾಕು ಭಯದ ವಾತಾವರಣದಲ್ಲಿ ಬದುಕುತ್ತಾರೆ. ಈ ಭಯಕ್ಕೆ ಕಾರಣವಾಗಿರುವುದು ಕ್ಯಾಸನೂರು ಫಾರೆಸ್ಟ್ ಡಿಸೀಸ್.
ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಮೊದಲ ಬಾರಿಗೆ ಪತ್ತೆಯಾಗಿದ್ದು, 1957 ರಲ್ಲಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅರಣ್ಯದಂಚಿನ ಗ್ರಾಮವಾದ ಕ್ಯಾಸನೂರು ಗ್ರಾಮದಲ್ಲಿ ಈ ಕೀಟ ಪತ್ತೆಯಾಗಿತ್ತು. ಅಲ್ಲಿಂದ ಇದು ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾಗಿ, ರಾಜ್ಯದ ಚಿಕ್ಕಮಗಳೂರು, ಉಡುಪಿ, ಹಾಸನ, ಮೈಸೂರು, ಚಾಮರಾಜನಗರ ಹೀಗೆ ಕಾಡು ಪ್ರದೇಶ ಹೊಂದಿರುವ ಭಾಗಗಳಲ್ಲಿ ಈ ರೋಗ ಹರಡಿಕೊಂಡಿದೆ. ಕೆಎಫ್ಡಿ ಪತ್ತೆಯಾಗಿ ಇಲ್ಲಿದೆ 66 ವರ್ಷಗಳಾಗಿವೆ. ಇದುವರೆಗೂ ಇದಕ್ಕೆ ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ಇಲ್ಲ.
ಉಣ್ಣೆ ಕಚ್ಚುವುದರಿಂದ ಹರಡುವ ರೋಗ: ಕೆಎಫ್ಡಿ ರೋಗವು ಒಂದು ಸಣ್ಣ ಕೀಟದಿಂದ ಮನುಷ್ಯನಿಗೆ ಹರಡುತ್ತಿದೆ. ಇದು ಕಾಡಿನಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ಗಾತ್ರದಲ್ಲಿ ಇರುತ್ತದೆ. ಇದು ಮುಖ್ಯವಾಗಿ ಕಾಡು ಪ್ರಾಣಿಗಳ ಮೈಮೇಲೆ ವಾಸವಾಗಿರುತ್ತದೆ. ಪ್ರಾಣಿಗಳ ರಕ್ತ ಕುಡಿಯುತ್ತ, ತನ್ನ ವಂಶವನ್ನು ಹೆಚ್ಚಿಸಿಕೊಳ್ಳುತ್ತದೆ.
ಮಂಗನ ಕಾಯಿಲೆ ಅಂತಾ ಕರೆಯೋದೇಕೆ? ಸಣ್ಣ ಕೀಟವಾಗಿರುವ ಉಣ್ಣೆ ಹೆಚ್ಚಾಗಿ ಮಂಗನ ದೇಹದಲ್ಲಿ ಇರುತ್ತದೆ. ಕೋತಿ ಕಾಡಿನಲ್ಲಿ ಮೃತಪಟ್ಟರೆ ಇದು ಆ ದೇಹದಿಂದ ಬೇರೆ ಪ್ರಾಣಿಯನ್ನು ಆಶ್ರಯಿಸುತ್ತದೆ. ಇದಕ್ಕಾಗಿಯೇ ಮಂಗನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಕಾಡಂಚಿನ ಗ್ರಾಮಗಳ ಜಾನುವಾರುಗಳು ಕಾಡಿಗೆ ಮೇಯಿಲು ಹೋದಾಗ ಅವುಗಳಿಗೆ ಈ ಉಣ್ಣೆ ಹತ್ತಿಕೊಳ್ಳುತ್ತವೆ. ಈ ಜಾನುವಾರುಗಳು ಮನೆಗೆ ಬಂದಾಗ ಮನುಷ್ಯ ಇದರ ಸಂಪರ್ಕಕ್ಕೆ ಬಂದಾಗ, ಈ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ, ಮನುಷ್ಯನಿಗೆ ಮೊದಲು ಜ್ವರ ಬರುತ್ತದೆ. ನಂತರ ಸುಸ್ತು ಹೆಚ್ಚಾಗುತ್ತದೆ. ನಂತರ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದು ಮನುಷ್ಯನ ಜೀವಕ್ಕೇ ಹಾನಿಯನ್ನುಂಟು ಮಾಡುತ್ತದೆ.