ಬೆಂಗಳೂರು: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಹೃದಯಾಘಾತಕ್ಕೆ ಒಳಗಾದವರಿಗೆ (Golden Hour) ಒಳಗೆ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಹಾಗಾಗಿ, ರಾಜ್ಯ ಸರ್ಕಾರ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಹೆಸರಿನಲ್ಲೇ ‘ಹೃದಯ ಜ್ಯೋತಿ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಪುನೀತ್ ಹೃದಯ ಜ್ಯೋತಿ’ ಯೋಜನೆ ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದೆ. ತುರ್ತು ಇದ್ದಾಗ ಜನರು ಈ ಸೇವೆ ಬಳಸಬಹುದು. ಈ ಕಾರ್ಯಕ್ರಮಕ್ಕೆ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ” ಎಂದು ಮಾಹಿತಿ ನೀಡಿದರು.
“ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು. ಗೋಲ್ಡನ್ ಅವರ್ ಒಳಗೆ ಸಕಾಲಕ್ಕೆ ಅವರಿಗೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಹೃದಯಾಘಾತ ಆದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು. ಸರಿಯಾಗಿ ಚಿಕಿತ್ಸೆ ದೊರೆತರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ರಾಜ್ಯದ 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಫೋಕ್ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್ಗಳನ್ನು ರಚಿಸಲಾಗಿದೆ” ಎಂದು ಹೇಳಿದರು.
“ತುಂಬಾ ಕ್ರಿಟಿಕಲ್ ಹಂತದಲ್ಲಿದ್ದರೆ ಸ್ಪೋಕ್ ಕೇಂದ್ರಗಳಲ್ಲಿ ಉಚಿತವಾಗಿ ಟೆನೆಕ್ಟೆಪ್ಲೇಸ್ (Tenecteplase) ಇಂಜೆಕ್ಷನ್ ಕೊಡಲಾಗುತ್ತದೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ, ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ನಂತರ ಜಿಲ್ಲಾ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು” ಎಂದು ವಿವರಿಸಿದರು.
“ಅಧ್ಯಯನದ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುತ್ತಿರುವವರು ಶೇ.35ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸುವುದು ಆರೋಗ್ಯ ಸಚಿವನಾಗಿ ನನ್ನ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲೇ ಕರ್ನಾಟಕ ರತ್ನ ಡಾ.ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ಎರಡು ರೀತಿಯಲ್ಲಿ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಹಬ್ ಆಯಂಡ್ ಸ್ಪೋಕ್ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸುವುದು. ಹಬ್ ಆಯಂಡ್ ಸ್ಪೋಕ್ ಕೇಂದ್ರಗಳ ಮಾದರಿ, ಹಠಾತ್ ಹೃದಯಾಘಾತಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ” ಎಂದರು.
“ಯಾರಿಗೆ ಎದೆನೋವು ಕಾಣಿಸಿಕೊಂಡರೂ, ಅವರು ನಮ್ಮ ಸ್ಫೋಕ್ ಕೇಂದ್ರಗಳಿಗೆ ಭೇಟಿ ನೀಡಿದರೆ, ತಕ್ಷಣ ಇಸಿಜಿ ಮಾಡಲಾಗುತ್ತದೆ. AI ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ? ಅನ್ನೋದನ್ನು ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತದೆ. ಟ್ರಿಕೋಗ್ ಸಂಸ್ಥೆಯವರ AI ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನು ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ” ಎಂದು ತಿಳಿಸಿದರು