Breaking News

ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2023-24ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲು ಪೂರ್ವಭಾವಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

Spread the love

ಬೆಂಗಳೂರು: ರಾಜ್ಯದ ರೈತರು, ಬಡವರು, ಆರ್ಥಿಕ ದುರ್ಬಲರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಸಿಗಬೇಕೆಂಬ ದೃಷ್ಟಿಯಿಂದ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು 2002ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆರಂಭಿಸಿದ್ದರು.

ಈ ಯೋಜನೆಯು ಜೂನ್ 1, 2003 ರಂದು ಕಾರ್ಯರೂಪಕ್ಕೆ ಬಂದಿದೆ. ಕಾಲಾನಂತರದಲ್ಲಿ ಸ್ಥಗಿತಗೊಂಡಿತ್ತು.

ರಾಜ್ಯದ ಸಹಕಾರಿಗಳು ಹಾಗೂ ರೈತರ ನಿರಂತರ ಒತ್ತಾಯ ಮತ್ತು ಬೇಡಿಕೆ ಪರಿಗಣಿಸಿ 2018ರಲ್ಲಿ ಸ್ಥಗಿತಗೊಳಿಸಿದ್ದ ಯಶಸ್ವಿನಿ ಯೋಜನೆಯನ್ನು ಪುನರ್‌ಜಾರಿಗೊಳಿಸಲು ಅಂದಿನ ರಾಜ್ಯ ಸರ್ಕಾರ ತೀರ್ಮಾನಿಸಿತು. 2022-23 ನೇ ಸಾಲಿನ ಬಜೆಟ್​ನಲ್ಲಿ ಪರಿಷ್ಕೃತ ಯೋಜನೆಯನ್ನು ಜಾರಿಗೊಳಿಸಲು ಘೋಷಣೆ ಮಾಡಿ 300 ಕೋಟಿ ರೂ. ಅನುದಾನದ ಅವಕಾಶ ಕಲ್ಪಿಸಿದ್ದು, 100 ಕೋಟಿ ರೂ. ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯನ್ನು ‘ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್’ ಮೂಲಕ ಜಾರಿಗೊಳಿಸಲಾಗುತ್ತಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ’ಗೆ 2023-24 ನೇ ಸಾಲಿಗೆ ಯೋಜನೆ ಅನುಷ್ಠಾನಗೊಳಿಸಲು ಪೂರ್ವಭಾವಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. ನವೆಂಬರ್‌ನಿಂದ ಸದಸ್ಯರ ನೊಂದಣಿ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯಾದ್ಯಂತ ಇರುವ ಯಶಸ್ವಿನಿ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಮಾರ್ಚ್ 1, 2023 ರಿಂದ ಫಲಾನುಭವಿಗಳಿಗೆ ಚಿಕಿತ್ಸೆಗೆ ಅವಕಾಶ ಕಲ್ಪಿಸಿದ್ದು, ಯೋಜನಾ ಅವಧಿ 2023, ಡಿಸೆಂಬರ್ 31 ರವರೆಗೆ ಇದೆ. ಕುಟುಂಬದ ವಾರ್ಷಿಕ ವೈದ್ಯಕೀಯ ವೆಚ್ಚದ ಮಿತಿ 5 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಫೆಬ್ರವರಿ 28ಕ್ಕೆ ಸದಸ್ಯತ್ವ ನೋಂದಣಿಗೆ ಕೊನೆಯ ದಿನವಾಗಿತ್ತು. ಸಹಕಾರ ಸಂಘಗಳ ಸದಸ್ಯರ ಅನುಕೂಲಕ್ಕಾಗಿ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯ ನೋಂದಣಿ ದಿನಾಂಕವನ್ನು ಸರ್ಕಾರ ಮಾರ್ಚ್ 31 ರವರೆಗೆ ವಿಸ್ತರಿಸಿತ್ತು.

ನೊಂದಣಿ ಎಷ್ಟು?: ಆರಂಭದಲ್ಲಿ 30 ಲಕ್ಷ ನೋಂದಣಿ ಗುರಿ ನಿಗದಿ ಮಾಡಲಾಗಿತ್ತು. ಮಾರ್ಚ್ 31ಕ್ಕೆ 47,43,753 ಸದಸ್ಯರನ್ನು ನೋಂದಾಯಿಸುವ ಮೂಲಕ ಗುರಿ ಮೀರಿ ಸಾಧನೆ ಮಾಡಲಾಗಿದೆ. ಇಲ್ಲಿಯವರೆಗೆ 13.27 ಲಕ್ಷ ಕುಟುಂಬಗಳಿಗೆ ಯಶಸ್ವಿನಿ ಕಾರ್ಡ್​ಗಳನ್ನು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಯೋಜನೆಯಡಿ ರಾಜ್ಯಾದ್ಯಂತ ಇಲ್ಲಿಯವರೆಗೆ 590 ನೆಟ್​ವರ್ಕ್ ಆಸ್ಪತ್ರೆಗಳು ನೊಂದಣಿ ಮಾಡಿಕೊಂಡಿವೆ.

ಚಿಕಿತ್ಸೆ ಪಡೆದ ಫಲಾನುಭವಿಗಳೆಷ್ಟು?: 2023ರ ಜ.1ರಿಂದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. ಸೆಪ್ಟೆಂಬರ್ 10 ರವರೆಗೆ ಸುಮಾರು 35 ಸಾವಿರ ಫಲಾನುಭವಿಗಳು ಸುಮಾರು 59 ಕೋಟಿ ರೂ. ಮೊತ್ತದ ಚಿಕಿತ್ಸೆ ಸೌಲಭ್ಯವನ್ನು ರಾಜ್ಯದ ವಿವಿಧ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಪಡೆದಿದ್ದಾರೆ.

ಸೌಲಭ್ಯ ಪಡೆಯುವುದು ಹೇಗೆ?: ಯಶಸ್ವಿನಿ ಫಲಾನುಭವಿಗಳು ಶಸ್ತ್ರಚಿಕಿತ್ಸೆ ಮಾಡಿಸಬೇಕಾದಲ್ಲಿ ತಮ್ಮ ಯೂನಿಕ್ ಐಡಿ ಸಂಖ್ಯೆ ಹೊಂದಿರುವ ಅಂದರೆ ಸದಸ್ಯರ ಉಪಯೋಗಕ್ಕಾಗಿ ನೀಡಲಾದ ಮೂಲ ಗುರುತಿನ ಪ್ಲಾಸ್ಟಿಕ್ ಕಾರ್ಡ್ ಮತ್ತು ಮೂಲ ಹಣ ಪಾವತಿ ರಸೀದಿಯೊಂದಿಗೆ ಯೋಜನೆಯಡಿ ಅಂಗೀಕೃತ ಆಸ್ಪತ್ರೆಗೆ ಭೇಟಿ ನೀಡಬೇಕು. ಈ ಗುರುತಿನ ಚೀಟಿಯನ್ನು ಹಾಜರುಪಡಿಸಿ ಗುರುತಿಸಿದ ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಚಿಕಿತ್ಸೆಗಳು ಮತ್ತು 478 ಐಸಿಯು ಸೇರಿ ಒಟ್ಟು 2128 ಚಿಕಿತ್ಸೆಗಳನ್ನು ನಗದುರಹಿತವಾಗಿ ಪಡೆಯಲು ಅವಕಾಶ ಇದೆ.

ಅನುದಾನ: 2022-23 ನೇ ಸಾಲಿಗೆ ಬಜೆಟ್‌ನಲ್ಲಿ ಯಶಸ್ವಿನಿ ಯೋಜನೆಗೆ 100 ಕೋಟಿ ಹಂಚಿಕೆ ಮಾಡಲಾಗಿತ್ತು. ಸದಸ್ಯರಿಂದ ಸದಸ್ಯತ್ವ ನೋಂದಣಿ ವಂತಿಗೆ ಸುಮಾರು 61.25 ಕೋಟಿ ಸಂಗ್ರಹಣೆ ಆಗಿದೆ. ಇನ್ನು 2023-24 ನೇ ಸಾಲಿಗೆ ರಾಜ್ಯ ಸರ್ಕಾರ ಈ ಯೋಜನೆಗೆ 150 ಕೋಟಿ ರೂ.ವನ್ನು ಬಜೆಟ್ ನಲ್ಲಿ ಕಲ್ಪಿಸಲಾಗಿದೆ.

ಚಿಕಿತ್ಸೆಗಳ ವಿವರ: ಸರ್ಜಿಕಲ್ ಆಂಕೊಲಾಜಿ, ನಾಯಿ ಕಡಿತ, ಹಾವು ಕಡಿತ, ನರವೈಜ್ಞಾನಿಕ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆ, ಮುಳುಗುವಿಕೆ, ಗ್ಯಾಸ್ಟ್ರೋಎಂಟರಾಲಜಿ, ನೇತ್ರವಿಜ್ಞಾನ, ಸಾಮಾನ್ಯ ಶಸ್ತ್ರಚಿಕಿತ್ಸೆ, ನವಜಾತ ಶಿಶುಗಳ ತೀವ್ರ ನಿಗಾ, ಜಂಟಿ ಬದಲಿ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ಅಥವಾ ಹೃದಯ ಕಸಿ ರೋಗ ನಿರ್ಣಯದ ತನಿಖೆಗಳು, ಅನುಸರಣಾ ಚಿಕಿತ್ಸೆಗಳು, ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ, ಸುಟ್ಟಗಾಯಗಳು, ಇಂಪ್ಲಾಂಟ್‌ಗಳು, ಕೃತಕ ಅಂಗಗಳು ಮತ್ತು ಚರ್ಮದ ಕಸಿ, ಕಿಮೊಥೆರಪಿ, ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಒಳರೋಗಿಗಳ ವೈದ್ಯಕೀಯ ಚಿಕಿತ್ಸೆ, ದಂತ ಶಸ್ತ್ರ ಚಿಕಿತ್ಸೆ, ಡಯಾಲಿಸಿಸ್, ರಸ್ತೆ ಅಪಘಾತಗಳು.

ಯಶಸ್ವಿನಿ ಕಾರ್ಡ್‌ಗೆ ಯಾರು ಅರ್ಹರು?: ರಾಜ್ಯದ ಯಾವುದೇ ಸಹಕಾರ ಸಂಘದ (ಗ್ರಾಮೀಣ ಮತ್ತು ನಗರ) ಸದಸ್ಯರು, ಸ್ವ-ಸಹಾಯ ಗುಂಪುಗಳ ಸದಸ್ಯರು, ಸಹಕಾರಿ ಮೀನುಗಾರರು, ಬೀಡಿ ಕಾರ್ಮಿಕರು, ನೇಕಾರರು, ನಿಗದಿತ ವಾರ್ಷಿಕ ವಂತಿಗೆ ಪಾವತಿಗೆ ಯಾವುದೇ ವಯೋಮಿತಿ ನಿರ್ಬಂಧ ಇಲ್ಲದೇ ಯಶಸ್ವಿನಿ ಯೋಜನೆ ಸದಸ್ಯರಾಗಬಹುದಾಗಿದೆ.

ಇವರಿಗೆ ಅನ್ವಯಿಸುವುದಿಲ್ಲ: ಸಹಕಾರ ಸಂಘಗಳ, ನಿಷ್ಕ್ರಿಯ ಸಹಕಾರ ಸಂಘಗಳ ಮತ್ತು ನೌಕರರ ಸಹಕಾರ ಸಂಘಗಳ ಸದಸ್ಯರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಪ್ರಧಾನ ಅರ್ಜಿದಾರರು ಮತ್ತು ಅವನ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿ ಅಥವಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಾಸಿಕ 30 ಸಾವಿರ ರೂ.ಗಿಂತ ಹೆಚ್ಚು ಅಥವಾ ವಾರ್ಷಿಕ 3,60 ಲಕ್ಷ ರೂ. ಗಿಂತ ಹೆಚ್ಚು ಒಟ್ಟು ವೇತನ ಪಡೆಯುತ್ತಿದ್ದಲ್ಲಿ ಈ ಯೋಜನೆಗೆ ಅರ್ಹರಿರುವುದಿಲ್ಲ. ಯಾವುದೇ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಸದಸ್ಯರಾಗಿದ್ದಲ್ಲಿ ಅಂತಹವರು ಯಶಸ್ವಿನಿ ಯೋಜನೆಯಡಿ ಸದಸ್ಯನಾಗಲು ಅರ್ಹರಲ್ಲ. ಯೋಜನೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸಿನ ಮಿತಿ 75 ವರ್ಷಗಳು. ಈ ವಯಸ್ಸಿನ ಕೆಳಗಿನ ವ್ಯಕ್ತಿಗಳು ಅರ್ಜಿ ಸಲ್ಲಿಸಲು ಅರ್ಹರು.

ವಂತಿಗೆ ಹೇಗೆ?: ವಾರ್ಷಿಕ ಸದಸ್ಯತ್ವ- (ನಾಲ್ಕು ಸದಸ್ಯರ ಕುಟುಂಬಕ್ಕೆ) ಗ್ರಾಮೀಣದವರಿಗೆ 500 ರೂ. ಮತ್ತು ನಗರದವರಿಗೆ 1 ಸಾವಿರ ರೂ. ಮತ್ತು ಹೆಚ್ಚಿನ ಪ್ರತಿ ಅವಲಂಭಿತ ಸದಸ್ಯರಿಗೆ ಗ್ರಾಮೀನ ತಲಾ 100 ರೂ. ಮತ್ತು ನಗರ ತಲಾ 200 ರೂ. ವಂತಿಗೆ ಪಾವತಿಸಿ ಸದಸ್ಯರಾಗಬಹುದು. ಇನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸದಸ್ಯರ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ