Breaking News

ಈರುಳ್ಳಿ ಬೆಲೆ ಏರಿಕೆ ಆತಂಕ; ಬಫರ್ ಸ್ಟಾಕ್ ಬಿಡುಗಡೆ ಆರಂಭಿಸಿದ ಕೇಂದ್ರ

Spread the love

ನವದೆಹಲಿ: ದೇಶದ ಕೆಲ ಭಾಗಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ವರದಿಗಳಿಂದ ಅಲರ್ಟ್​ ಆಗಿರುವ ಕೇಂದ್ರ ಸರ್ಕಾರ ತನ್ನ ಬಫರ್ ಸ್ಟಾಕ್​ನಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ.

ಈ ಮೂಲಕ ಈರುಳ್ಳಿಯ ಬೆಲೆ ಏರಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ತ್ವರಿತವಾಗಿ ಮಧ್ಯ ಪ್ರವೇಶಿಸಿದೆ.

2023-24ರ ಋತುವಿನಲ್ಲಿ 3 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. 2022-23ರಲ್ಲಿ ಸರ್ಕಾರ 2.51 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ಉಳಿಸಿಕೊಂಡಿತ್ತು. ನಿರ್ದಿಷ್ಟ ಋತುಮಾನದಲ್ಲಿ ಪೂರೈಕೆ ಕಡಿಮೆಯಾಗಿ ದರಗಳು ಗಮನಾರ್ಹವಾಗಿ ಹೆಚ್ಚಾದರೆ ಅಂಥ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸಲು ಮತ್ತು ಬೆಲೆಗಳಲ್ಲಿ ಸ್ಥಿರತೆ ಕಾಪಾಡಲು ಬಫರ್ ಸ್ಟಾಕ್ ಅನ್ನು ನಿರ್ವಹಿಸಲಾಗುತ್ತದೆ.

ಸರ್ಕಾರದ ಕೃಷಿ ಮಾರುಕಟ್ಟೆ ಏಜೆನ್ಸಿಗಳಾದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ನಿಯಮಿತ (ಎನ್ಸಿಸಿಎಫ್) ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಗುರುವಾರ ನಡೆಸಿದ ಸಭೆಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಈರುಳ್ಳಿ ಬಫರ್ ಸ್ಟಾಕ್ ಬಿಡುಗಡೆಯ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಿದರು.

“ಈರುಳ್ಳಿಯ ಚಿಲ್ಲರೆ ಬೆಲೆಗಳು ಅಖಿಲ ಭಾರತ ಸರಾಸರಿಗಿಂತ ಹೆಚ್ಚಿರುವ ಮತ್ತು ಹಿಂದಿನ ತಿಂಗಳು ಮತ್ತು ವರ್ಷದಲ್ಲಿ ನಿರ್ದಿಷ್ಟ ಮಿತಿಯನ್ನು ಮೀರಿ ಬೆಲೆ ಹೆಚ್ಚಾಗಿರುವ ರಾಜ್ಯಗಳು ಅಥವಾ ಪ್ರದೇಶಗಳಲ್ಲಿನ ಪ್ರಮುಖ ಮಾರುಕಟ್ಟೆಗಳಲ್ಲಿ ಈರುಳ್ಳಿ ದಾಸ್ತಾನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇ-ಹರಾಜು ಮತ್ತು ಇ-ಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಚಿಲ್ಲರೆಯಾಗಿ ಈರುಳ್ಳಿ ಮಾರಾಟ ಮಾಡಲು ಕೂಡ ಪರಿಶೀಲನೆ ನಡೆಸಲಾಗುತ್ತಿದೆ” ಎಂದು ಆಹಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಬೆಲೆ ಮತ್ತು ಲಭ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸ್ಟಾಕ್​ ಬಿಡುಗಡೆಯ ಪ್ರಮಾಣ ಮತ್ತು ವೇಗವನ್ನು ನಿರ್ಧರಿಸಲಾಗುತ್ತದೆ. ಮಾರುಕಟ್ಟೆ ವಿಲೇವಾರಿಯ ಹೊರತಾಗಿ, ರಾಜ್ಯಗಳು ತಮ್ಮ ಗ್ರಾಹಕ ಸಹಕಾರಿ ಸಂಸ್ಥೆಗಳು ಮತ್ತು ನಿಗಮಗಳ ಚಿಲ್ಲರೆ ಮಳಿಗೆಗಳ ಮೂಲಕ ಮಾರಾಟ ಮಾಡಲು ರಿಯಾಯಿತಿ ದರದಲ್ಲಿ ಈರುಳ್ಳಿ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ