Breaking News

ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆಗೆ ಮನೆ ಕುಸಿದು ಬಿದ್ದು 13 ಮಂದಿ ಗಾಯ

Spread the love

ಬೆಳಗಾವಿ : ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಭಾರಿ ಮಳೆಗೆ ಮನೆ ಕುಸಿದು ಬಿದ್ದು ಒಂದೇ ಕುಟುಂಬದ 13 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಶುಕ್ರವಾರ ಮನೆಯ ಸದಸ್ಯರೆಲ್ಲ ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದರು. ಈ ವೇಳೆ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಸದ್ದು ಕೇಳಿ ಮನೆಯಿಂದ ಹೊರ ಓಡಿ ಬರುತ್ತಿದ್ದಂತೆ ಮನೆಯ ಗೋಡೆಯೂ ಕುಸಿದಿದೆ. ಗೋಡೆಗಳು ಕುಸಿಯುತ್ತಿದ್ದಂತೆ ಸಂಪೂರ್ಣ ಮನೆಯೇ ನೆಲಸಮವಾಗಿದೆ. ಈ ವೇಳೆ ವೃದ್ಧೆ ಈರಮ್ಮ ಪತ್ರೆಪ್ಪನವರ (95), ಸುಮಂತ ಪತ್ರೆಪ್ಪನವರ (8), ಸಂಬಂಧಿ ಬಸವಣ್ಣೆಪ್ಪ ತಡಕೋಡ (55), ಶಂಕರೆಪ್ಪ ಪತ್ರೆಪ್ಪನವರ (50), ವಿನಾಯಕ ಪತ್ರೆಪ್ಪನವರ (15), ಪಾರವ್ವ ಪತ್ರೆಪ್ಪನವರ (55) ಅವಶೇಷಗಳಡಿ ಸಿಲುಕಿದ್ದಾರೆ. ಮನೆ ಬಿದ್ದ ಸದ್ದು ಕೇಳಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಕ್ಕಪಕ್ಕದ ಮನೆಯವರು ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಣೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೊತೆಗೆ ಸಂಗಮೇಶ ಪತ್ರೆಪ್ಪನವರ, ಶಿವಾನಂದ ಪತ್ರೆಪ್ಪನವರ, ಶೋಭಾ ಪತ್ರೆಪ್ಪನವರ, ಮಹಾದೇವಿ ಪತ್ರೆಪ್ಪನವರ, ಯಲ್ಲಪ್ಪ ಪತ್ರೆಪ್ಪನವರ, ಕಸ್ತೂರಿ ಪತ್ರೆಪ್ಪನವರ, ಬಸವಣ್ಣೆಪ್ಪ ಪತ್ರೆಪ್ಪನವರ ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಉಪ ವಿಭಾಗಾಧಿಕಾರಿ, ತಹಶೀಲ್ದಾರ್​, ತಾಪಂ‌ ಇಒ, ಪಿಡಿಒ, ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲೂ ಭಾರಿ ಮಳೆ : ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಹಲವೆಡೆ ಆಸ್ತಿ ಪಾಸ್ತಿಗಳಿಗೆ ಹಾನಿ ಸಂಭವಿಸಿದೆ. ಮಳೆಯ ಆರ್ಭಟಕ್ಕೆ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ‌ ಇಂದು ನಡೆದಿದೆ. ಸಾಗರ ಪಟ್ಟಣದ 25ನೇ ವಾರ್ಡ್​ನಲ್ಲಿ ಸುಮಾರು‌ 100 ವರ್ಷ ಹಳೆಯದಾದ ಮರ ಧರೆಗುರುಳಿದೆ. ಇದರಿಂದಾಗಿ ನಗರಸಭೆ ಸದಸ್ಯೆ ಮಧುಮಾಲತಿ ಎಂಬುವರ ಮನೆ ಸಂಪೂರ್ಣ ಜಖಂ ಆಗಿದೆ. ಅದೃಷ್ವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇದರ ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಮನೆಮುಂದೆ ನಿಲ್ಲಿಸಿದ್ದ ವಾಹನಗಳು ಜಖಂಗೊಂಡಿವೆ.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ