ರಾಮನಗರ: ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಪಾನಮತ್ತರಾಗಿ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಎಸ್‌ಐ ಸೇರಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ.
ಮಾಗಡಿ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್ ಕೆ.ಎನ್., ಡಿಸಿಆರ್ಬಿ ಘಟಕದ ಎಎಸ್‌ಐ ಗೋವಿಂದಯ್ಯ ಜಿ.ಎಸ್ ಮತ್ತು ಚನ್ನಪಟ್ಟಣ ಪುರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೆಬಲ್ ನಾರಾಯಣ ಮೂರ್ತಿ ಅಮಾನತುಗೊಂಡಿದ್ದಾರೆ.
ಮೈಮೇಲೆ ಪ್ರಜ್ಞೆ ಇಲ್ಲದೇ ಯೂನಿಫಾರ್ಮ್ ಕಳಚಿಟ್ಟಿದ್ದು, ನಂತರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪಗಳ ಮೇರೆಗೆ ಅಮಾನತು ಮಾಡಲಾಗಿದೆ. ಮದ್ಯದ ಅಮಲಿನಲ್ಲಿದ್ದ ಪೊಲೀಸರು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಾರ್ವಜನಿಕರನ್ನೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಿಂದಿಸಿದ ಪೊಲೀಸರ ಕಾರನ್ನು ಸಾರ್ವಜನಿಕರು ಹಿಂಬಾಲಿಸಿ, ಅಡ್ಡಗಟ್ಟಿದ್ದಾರೆ. ಪೊಲೀಸರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಆಗಲೂ ಪೊಲೀಸರು ಅಮಲಿನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.