ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ.
ಹಾವೇರಿ: ಏಲಕ್ಕಿ ಕಂಪಿನ ನಗರ ಹಾವೇರಿಯಲ್ಲಿ ಇದೀಗ ದೇಶದ ವಿವಿಧೆಡೆ ಗಣೇಶ ಮೂರ್ತಿಗಳ ಕೊರಳು ಅಲಂಕರಿಸುವ ಏಲಕ್ಕಿ ಮಾಲೆಗಳು ಸಿದ್ಧವಾಗುತ್ತೀವೆ. ಹಾವೇರಿ ನಗರದಲ್ಲಿ ಸುಮಾರು 5ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳು ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. ಈಗಾಗಲೇ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆಗೆ ಏಲಕ್ಕಿ ಮಾಲೆಗಳನ್ನು ಅಂಚೆ ಕೊರಿಯರ್ ಮೂಲಕ ಕಳುಹಿಸಲಾಗಿದೆ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಕಲಾವಿದರು ಗಣೇಶ ಮೂರ್ತಿಗಳನ್ನು ತಯಾರಿಸಲು ಆರಂಭಿಸಿದರೆ ಈ ಕುಟುಂಬಗಳು ಏಲಕ್ಕಿ ಮಾಲೆಗಳ ತಯಾರಿಕೆಯಲ್ಲಿ ನಿರತವಾಗುತ್ತವೆ.
ಗಣೇಶ ಹಬ್ಬವೇ ಅಧಿಕ ಆದಾಯ ತರುವ ಸೀಸಜನ್: ಈ ಮುಸ್ಲಿಂ ಕುಟುಂಬಗಳಿಗೆ ಗಣೇಶ ಚತುರ್ಥಿ ಹಬ್ಬವೇ ದೊಡ್ಡ ಸೀಸನ್. ಈ ಹಬ್ಬದಲ್ಲಿ ಏಲಕ್ಕಿ ಮಾಲೆಗಳು ಮಾರಾಟವಾಗುವಷ್ಟು ವರ್ಷದ ಮತ್ಯಾವ ಸೀಜನ್ನಲ್ಲೂ ಮಾರಾಟವಾಗುವುದಿಲ್ಲ. ಉಳಿದ ಸೀಜನ್ಗಳದ್ದು ಒಂದು ಲೆಕ್ಕವಾದರೇ ಗಣೇಶ ಹಬ್ಬದ ಸೀಜನ್ದ್ದೇ ಒಂದು ಲೆಕ್ಕ ಎನ್ನುತ್ತಾರೆ ಏಲಕ್ಕಿ ಮಾಲೆ ತಯಾರಿಸುವ ಕುಟುಂಬಗಳು.
ಏಲಕ್ಕಿ ಮಾಲೆ ತಯಾರಿಸುವ ಕುಟುಂಬಗಳು ಗಣೇಶ ಚತುರ್ಥಿ ದಿನಗಳು ಹತ್ತಿರ ಬಂದರೆ ಪುರುಸೊತ್ತಿಲ್ಲದೇ ಏಲಕ್ಕಿ ಮಾಲೆ ತಯಾರಿಸುತ್ತವೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಸಣ್ಣ ಗಣೇಶ ಮೂರ್ತಿಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳಿಗೆ ಇಲ್ಲಿಯ ಕಲಾವಿದರು ಏಲಕ್ಕಿ ಮಾಲೆ ತಯಾರಿಸುತ್ತಾರೆ.