ಮೈಸೂರು: ರಾಜವಂಶಸ್ಥರು ಅರಮನೆಯಲ್ಲಿ ನವರಾತ್ರಿ ಪೂಜಾ ಕೈಂಕರ್ಯಗಳನ್ನು ನಡೆಸುವ ಹಿನ್ನೆಲೆಯಲ್ಲಿ ಇಂದು ದರ್ಬಾರ್ ಹಾಲ್ನಲ್ಲಿ ಮಹಾರಾಣಿ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ನುರಿತ ಗೆಜ್ಜಗಳ್ಳಿಯವರು ರತ್ನಖಚಿತ ಸ್ವರ್ಣ ಸಿಂಹಾಸನದ ಜೋಡಣೆ ಕಾರ್ಯ ನಡೆಸಿದರು.
ಇದಕ್ಕೂ ಮುನ್ನ ದರ್ಬಾರ್ ಹಾಲ್ನಲ್ಲಿ ಗಣಪತಿ ಹೋಮ, ಚಾಮುಂಡಿ ತಾಯಿಯ ಪೂಜೆ, ಹೋಮ-ಹವನಗಳನ್ನು ನೆರವೇರಿಸಲಾಯಿತು. ಬಳಿಕ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ತಂದು ಜೋಡಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿಷೇಧಿಸಲಾಗಿತ್ತು.
ನವರಾತ್ರಿ ಸಂದರ್ಭದಲ್ಲಿ ಮಾತ್ರ ನೋಡ ಸಿಗುವ ರತ್ನಖಚಿತ ಸ್ವರ್ಣ ಸಿಂಹಾಸನ ರಾಜವಂಶಸ್ಥರಿಗೆ ಸೇರಿದೆ. ಇದನ್ನು ಗೆಜ್ಜೆಗಳ್ಳಿಯ ಗ್ರಾಮಸ್ಥರು ಜೋಡಿಸುತ್ತಾರೆ. ಆ ಬಳಿಕ ದರ್ಬಾರ್ ಹಾಲ್ನಲ್ಲಿ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪರದೆಯಿಂದ ಮುಚ್ಚಲಾಗುತ್ತದೆ.
ಸೆ.22ರ ದಸರಾ ಉದ್ಘಾಟನೆಯ ದಿನ ಅರಮನೆಯಲ್ಲಿ ರಾಜ ಪರಂಪರೆಯಂತೆ ನವರಾತ್ರಿ ಸಂಭ್ರಮ ಜರುಗಲಿದ್ದು, ಬೆಳಿಗ್ಗೆ 10 ಗಂಟೆಯಿಂದ 12 ಗಂಟೆವರೆಗಿನ ಶುಭ ಗಳಿಗೆಯಲ್ಲಿ ಸಿಂಹಾಸನಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುತ್ತಾರೆ.