ಬೆಂಗಳೂರು: ಕೊರೊನಾ ಉಪಕರಣ ಖರೀದಿಯಲ್ಲಿ ಸರ್ಕಾರ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ಆರೋಪ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ.
ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಈ ಹಿಂದೆಯೇ ತಿಳಿಸಿತ್ತು. ಅದರಂತೆ ಸದ್ಯ ನೋಟಿಸ್ ಜಾರಿ ಮಾಡಲಾಗಿದ್ದು, ಮಾಹಿತಿಯೇ ಇಲ್ಲದೇ ಹೇಗೆ 2 ಸಾವಿರ ಕೋಟಿ ಆರೋಪ ಮಾಡಿದ್ದೀರಿ ಎಂದು ನೋಟಿಸ್‍ನಲ್ಲಿ ಪ್ರಶ್ನಿಸಿದೆ.
ರಾಜ್ಯ ಸರ್ಕಾರದ ನಾಲ್ಕು ಇಲಾಖೆಗಳಲ್ಲಿ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಸುಮಾರು 2 ಸಾವಿರ ಕೋಟಿ ರೂ. ಹೆಚ್ಚು ಅಕ್ರಮ ನಡೆದಿದೆ. ನಾವು ಸರ್ಕಾರಕ್ಕೆ ಲೆಕ್ಕಕೊಡಿ ಎಂದು ಪತ್ರ ಬರೆದರು ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದಾದರೆ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಕಾರಣ ಹಾಗೂ ದಾಖಲೆ ನೀಡಿ, ಇಲ್ಲವಾದರೆ ನಿಮ್ಮ ಆರೋಪವನ್ನು ವಾಪಸ್ ಪಡೆಯಿರಿ. ಬೇಷರತ್ ಕ್ಷಮೆ ಯಾಚಿಸಿ ಎಂದು ನೋಟಿಸ್‍ನಲ್ಲಿ ಬಿಜೆಪಿ ಆಗ್ರಹಿಸಿದೆ. ಸದ್ಯ ಬಿಜೆಪಿಯ ನೋಟಿಸ್‍ಗೆ ಕಾಂಗ್ರೆಸ್ ನಾಯಕರು ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಕಾದುನೋಡಬೇಕಿದೆ.