ಕಿತ್ತೂರು : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಅನ್ನಪೂರ್ಣಾ ಅಂಗಡಿ ಅವರ ಮೇಲೆ ಸೋಮವಾರ ತಡರಾತ್ರಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ್ದ ೫ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಅಬ್ದುಲ್ಲಾ ಇಮಾಮ್‌ಹುಸೇನ ಮುಜಾವ. ಸಮೀರ ಮಹಮ್ಮದ ರಫೀಕ ಮುಜಾವರ, ಸರ್ಪರಾಜ್ ಲಿಯಾಖತ್ ಮುಜಾವರ, ಸುಹೇಲ್ ಕುತುಬುದ್ದೀನ್ ಇಮಾಮನವರ ಹಾಗೂ ದಸ್ತಗೀರ ಮಕ್ತುಂಸಾಬ್ ಇಮಾಮನವರ ಬಂಧಿತ ಆರೋಪಿಗಳು. ಆರೋಪಿಗಳ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಕುರಿತಂತೆ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈಧ್ಯಾಧಿಕಾರಿ ಡಾ. ಎಸ್.ಸಿ. ಮಾಸ್ತಿಹೊಳಿ, ಪ್ರತಿನಿತ್ಯ ಸುಮಾರು ಒಂದು ತಿಂಗಳಿನಿಂದಲೂ ತನ್ನ ಸಹಚರರೊಡನೆ ಆಗಮಿಸುತ್ತಿದ್ದ ಅಬ್ದುಲ್ ಮುಜಾವರ ಎಂಬಾತ ವೈದ್ಯರಿಗೆ ಸುಖಾಸುಮ್ಮನೆ ಪೀಡಿಸುತ್ತಿದ್ದ. ಅಲ್ಲದೆ ಕೊರೊನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿಯೂ ಅಡ್ಡಿಪಡಿಸುತ್ತಿದ್ದ, ಅಲ್ಲದೆ ವೈದ್ಯರ ಜೊತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದ. ಈತ ಸುಖಾಸುಮ್ಮನೆ ನೀವು ಎಲ್ಲರನ್ನು ಯಾಕೆ ಪರೀಕ್ಷೆ ನಡೆಸುತ್ತಿದ್ದಿರಿ ಎಂದು ಪ್ರಶ್ನಿಸುವುದಲ್ಲದೆ ಬೆದರಿಕೆ ಒಡ್ಡುತ್ತಿದ್ದ ಎಂದು ಹೇಳಿದ ಅವರು, ಮನೆ ಮನೆಗೆ ತೆರಳಿ ಕೊರೋನಾ ಪರೀಕ್ಷೆ ಮಾಡುವ ಸಂದರ್ಭದಲ್ಲಿಯೂ ಆಶಾ ಕಾರ್ಯಕರ್ತರ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬೆದರಿಕೆಯೊಡ್ಡಿದ್ದ ಎಂದು ಹೇಳಿದರು.
ಆಸ್ಪತ್ರೆಯ ವೈದ್ಯೆ ಅನ್ನಪೂರ್ಣಾ ಅವರಿಗೆ ಈತ ನನಗೆ ನೀವು ತಿಂಗಳಾ ಹಫ್ತಾ ಕೊಡಬೇಕು ಎಂದು ಮಹಿಳಾ ವೈದ್ಯೆಗೆ ಬೇಡಿಕೆ ಇಟ್ಟು ಧಮಕಿ ಹಾಕಿದ್ದ. ಹಫ್ತಾ ಕೊಡದಿದ್ದರೆ ನಿನ್ನ ಉಳಿಸೊಲ್ಲ ಎಂದು ಫೋನ್‌ನಲ್ಲಿ ಹೆದರಿಸುತ್ತಿದ್ದ. ಸೋಮವಾರ ಅನ್ನಪೂರ್ಣಾ ಅವರ ಕರ್ತವ್ಯದ ಸಮಯವನ್ನು ಅರಿತ ಈತ ಸೊಮವಾರ ರಾತ್ರಿ ೧ ಗಂಟೆಗೆ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಲ್ಕು ಜನರ ತಂಡದೊಂದಿಗೆ ಆಗಮಿಸಿದ ಈ ಯುವಕ ವೈದ್ಯೆಯನ್ನು ಕರೆದಿದ್ದಾನೆ. ವೈದ್ಯರು ಡಿಲೆವರಿ ಪೇಶಂಟ್ ಬಂದಿದೆ. ನಾನು ಅಲ್ಲಿರುವೆ. ಬೇರೆ ವೈದ್ಯರಿದ್ದಾರೆ ಅವರನ್ನು ಭೇಟಿಯಾಗಿ ಎಂದು ಹೇಳಿದ್ದಾರೆ. ಅಷ್ಟಕ್ಕೇ ವೈದ್ಯೆ ಅನ್ನಪೂರ್ಣಾ ಅವರನ್ನು ಅವಾಚ್ಯ ಶಬ್ದಳಿಂದ ನಿಂದಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಆಸ್ಪತ್ರೆಯಲ್ಲಿನ ಆಶಾ ಕಾರ್ಯಕರ್ತೆಯರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಹೆದರಿದ ಆಶಾ ಕಾರ್ಯಕರ್ತೆಯರು ಪೊಲೀಸರಿಗೆ ಪೋನ್ ಮಾಡಿ ತಿಳಿಸಲಾಗಿ ಅಲ್ಲಿಂದ ಓಡಿಹೋದ ಯುವಕ ಮತ್ತೆ ಮಂಗಳವಾರ ಬೆಳಿಗ್ಗೆ ಪೋನ್ ಮೂಲಕ ಧಮಕಿ ಹಾಕಿದ್ದಾನೆ. ಇದರಿಂದ ರೋಸಿಹೋಗಿ ಕಿತ್ತೂರು ಪೊಲೀಸ ಠಾಣೆಯಲ್ಲಿ ಮಂಗಳವಾರ ಸಂಜೆ ೫ ಯುವಕರ ಮೇಲೂ ವೈದ್ಯೆ ಅನ್ನಪೂರ್ಣಾ ಮೋಹನ ಅಂಗಡಿ ಅವರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು.
ಖಾಸಗಿ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ವೆಂಕಟೇಶ ಉಣಕಲ್ಲಕರ, ಉಪಾಧ್ಯಕ್ಷರಾದ ಡಾ. ಲಾಡಖಾನ್ ಹಾಗೂ ಕಾರ್ಯದರ್ಶಿ ಡಾ. ಬಸವರಾಜ ಪರವನ್ನವರ ಅವರು ಮಾತನಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮಹಿಳಾ ವೈದ್ಯೆ ಮೇಲೆ ಹಲ್ಲೆಗೆ ಪ್ರಯತ್ನಿಸಿದ ಗೂಂಡಾಗಳ ಮೇಲೆ ಸರಕಾರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಂಡು ಆರೋಪಿಗಳನ್ನು ಜೈಲಿಗೆ ಅಟ್ಟಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಮಹಿಳಾ ಒಕ್ಕೂಟದ ಮಹಿಳಾ ಸದಸ್ಯರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಬೇಕು ಇಲ್ಲವಾದರೆ ಉಗ್ರ ಹೋರಾಟಕ್ಕೆ ನಾಡಿನ ಎಲ್ಲ ಮಹಿಳೆಯರು ಸಿದ್ದರಾಗಿದ್ದೇವೆ ಎಂದು ಎಚ್ಚರಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿತ್ತೂರು ಹಾಗೂ ಸುತ್ತಲಿನ ಖಾಸಗಿ ವ್ಯೆದ್ಯರ ಸಂಘದ ನೂರಾರು ಸದಸ್ಯ ವೈದ್ಯರು ಪ್ರಕರಣವನ್ನು ಖಂಡಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಆರೋಪಿಗಳನ್ನು ಬಂಧಿಸುವಂತೆ ಮನವಿ ಸಲ್ಲಿಸಿದ್ದರು.