2018ರಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಸದಾ ಒಂದಲ್ಲೊಂದು ಸುದ್ದಿಯಲ್ಲಿರುವ ಸಚಿವ ರಮೇಶ್ ಜಾರಕಿಹೊಳಿ ಇಟ್ಟಿರುವ ಇನ್ನೊಂದು ಹೆಜ್ಜೆ, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ರಾಜಕೀಯದಲ್ಲಿ ಮೂಗು ತೂರಿಸುತ್ತಿದ್ದಾರೆ ಎನ್ನುವ ವಿಚಾರದಲ್ಲಿ ಆರಂಭವಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ದ್ವೇಷ ಈಗ ಇನ್ನೊಂದು ಮಜಲಿಗೆ ಬಂದು ನಿಂತಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಗೋಕಾಕ್ ಉಪ ಚುನಾವಣೆ ಬಳಿಕ ಮತ್ತೆ ಒಂದಾದ್ರಾ ಜಾರಕಿಹೊಳಿ ಬ್ರದರ್ಸ್?
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ರಮೇಶ್ ಜಾರಕಿಹೊಳಿ, ಬಿಎಸ್ವೈ ಸರಕಾರದಲ್ಲಿ ಡಿಕೆಶಿ ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಯನ್ನು ಪಟ್ಟು ಹಿಡಿದು ಗಿಟ್ಟಿಸಿಕೊಂಡಿದ್ದರು.
ಈಗ, ಇದೇನು ಉದ್ದೇಶಪೂರ್ವಕವೋ ಇಲ್ಲವೋ ಎನ್ನುವುದರ ಬಗ್ಗೆ ಸದ್ಯ ಮಾಹಿತಿಯಿಲ್ಲ. ವಿಚಾರವೇನಂದರೆ, ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ.
‘ಬಾಡಿ ಲಾಂಗ್ವೇಜ್ ನೋಡಿದ್ರೆ ಗೊತ್ತಾಗುತ್ತೆ ಯಾರು ಮೆಂಟಲ್ ಅಂತಾ’
ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್
ಇತ್ತೀಚಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆರೋಪ, ಪ್ರತ್ಯಾರೋಪ ತೀರಾ ಕೆಳಮಟ್ಟಕ್ಕೆ ಹೋಗಿತ್ತು. ಜಾರಕಿಹೊಳಿಯನ್ನು ಡಿಕೆಶಿ ಪರೋಕ್ಷವಾಗಿ ‘ಮೆಂಟಲ್’ಎಂದಿದ್ದರು. ಅದಕ್ಕೆ ಜಾರಕಿಹೊಳಿ, ಬಾಡಿ ಲಾಂಗ್ವೇಜ್ ನೋಡಿದರೆ ಯಾರು ಮೆಂಟಲ್ ಎನ್ನುವುದು ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದ್ದರು.
ಸದಾಶಿವ ನಗರದಲ್ಲಿ ಮನೆಯೊಂದನ್ನು ಖರೀದಿಸಿ, ಗೃಹಪ್ರವೇಶ
ರಮೇಶ್ ಜಾರಕಿಹೊಳಿ ಬೆಂಗಳೂರಿನ ಪಾಶ್ ಏರಿಯಾ ಎಂದೇ ಕರೆಯಲ್ಪಡುವ ಸದಾಶಿವ ನಗರದಲ್ಲಿ ಮನೆಯೊಂದನ್ನು ಖರೀದಿಸಿದ್ದಾರೆ. ಈ ಮನೆ, ಡಿ.ಕೆ.ಶಿವಕುಮಾರ್ ಅವರ ಮನೆಯ ಹಿಂದಿನ ಮನೆ. ರೆಡಿಯಾಗಿದ್ದ ಮನೆಗೆ ಅಲ್ಪಸ್ವಲ್ಪ ಬದಲಾವಣೆಗಳನ್ನು ಮಾಡಿ, ಶುಕ್ರವಾರ (ಜೂ 19) ಗೃಹಪ್ರವೇಶವನ್ನೂ ನೆರವೇರಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಯಾರೋ ಒಂದಿಷ್ಟು ಜನ ಮೆಂಟಲ್‌ಗಳು ಮಾತನಾಡುತ್ತಾರೆ
“ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನಾಲ್ಕೈದು ಕಾಂಗ್ರೆಸ್ ಶಾಸಕರು ಬೆಂಬಲ ಕೊಡುತ್ತಾರೆ” ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ತಿರುಗೇಟು ಕೊಟ್ಟಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, “ಯಾರೋ ಒಂದಿಷ್ಟು ಜನ ಮೆಂಟಲ್‌ಗಳು ಮಾತನಾಡುತ್ತಾರೆ ಎಂದರೆ ನಮ್ಮ ಪಕ್ಷದ ನಿರ್ಧಾರ ಬದಲಾಗಲ್ಲ” ಎಂದು ಹೇಳಿದ್ದರು.
ಬಾಡಿ ಲಾಂಗ್ವೇಜ್ ನೋಡಿದರೆ ಯಾರು ಮೆಂಟಲ್
“ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದರೆ ಅವರ ಬಾಡಿ ಲಾಂಗ್ವೇಜ್ (ಆಂಗಿಕ ನಡುವಳಿಕೆ) ನೋಡಿದರೆ ಯಾರು ಮೆಂಟಲ್ ಆಗಿದ್ದಾರೆ ಎಂಬುದು ಅರಿವಾಗುತ್ತದೆ” ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ವಾಗ್ದಾಳಿ ನಡೆಸಿದ್ದಾರೆ. ಇವರಿಬ್ಬರ ನಡುವೆ ರಾಜಕೀಯ ಮೇಲಾಟ ನಡೆಯುತ್ತಲೇ ಇರುವ ಹೊತ್ತಿನಲ್ಲಿ, ಜಾರಕಿಹೊಳಿ ಮನೆ ಖರೀದಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.