ಬೆಂಗಳೂರು: ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ತನಿಖೆ ಮುಕ್ತಾಯವಾಗಿದ್ದು, ಅಂತಿಮ ತನಿಖಾ ವರದಿ ಸಿದ್ಧವಿದೆ ಎಂದು ಹೈಕೋರ್ಟ್ಗೆ ಎಜಿ ಪ್ರಭುಲಿಂಗ್ ನಾವದಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿಯಿಂದ ಹೈಕೋರ್ಟ್ಗೆ ಮೆಮೋ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಜುಲೈ 14ರವರೆಗೆ ಅಂತಿಮ ವರದಿ ಸಲ್ಲಿಸದಂತೆ ಎಸ್‌ಐಟಿ ಪೊಲೀಸರಿಗೆ ಸೂಚನೆ ನೀಡಿದೆ.
ಯುವತಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ದಾಖಲೆಗಳ ಇಂಗ್ಲಿಷ್ ಅನುವಾದ ಸಲ್ಲಿಸದ ಹಿನ್ನೆಲೆಯಲ್ಲಿ ಇಂಗ್ಲಿಷ್ ಅನುವಾದ ಸಲ್ಲಿಸಲು ಯುವತಿ ಪರ ವಕೀಲರಿಗೆ ಸೂಚನೆ ನೀಡಿದೆ. ಜತೆಗೆ ವಿಚಾರಣೆಯನ್ನು ಜುಲೈ 14ಕ್ಕೆ ಮುಂದೂಡಿದೆ. ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದ ವಿಚಾರಣೆ ವೇಳೆ ಸಚಿವರಾದ ಮಾಧುಸ್ವಾಮಿ ಮತ್ತು ಸುಧಾಕರ್ ಅವರುಗಳ ಹೇಳಿಕೆ ಪ್ರಸ್ತಾಪಗೊಂಡಿದೆ. ಇದು ಲೈಂಗಿಕ ದೌರ್ಜನ್ಯ ಕೇಸ್ ಅಲ್ಲವೆಂದು ಈ ಸಚಿವರರುಗಳು ಈಗಾಗಲೇ ಹೇಳಿಕೆ ನೀಡಿದ್ದರು. ಈ ಹೇಳಿಕೆಗಳು ತನಿಖೆಯಲ್ಲಿ ಹಸ್ತಕ್ಷೇಪದ ಯತ್ನವೆಂದು ಪಿಐಎಲ್ ಅರ್ಜಿದಾರರ ವಕೀಲ ಜಿ.ಆರ್.ಮೋಹನ್ ಆರೋಪಿಸಿದ್ದಾರೆ. ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿದೆ. ತನಿಖೆ ಬಗ್ಗೆ ಉತ್ತರಿಸಲು ಸರ್ಕಾರ ಹೈಕೋರ್ಟ್ ಮುಂದಿದೆ ಎಂದ ಹೈಕೋರ್ಟ್ ಸಿಜೆ ಅಭಯ್ ಶ್ರೀನಿವಾಸ್ ಒಕಾ ವಿಚಾರಣೆಯನ್ನು ಜುಲೈ14ಕ್ಕೆ ಮುಂದೂಡಿದ್ದಾರೆ.
ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಸ್ವಪಕ್ಷೀಯರ ವಿರುದ್ಧವೇ ತಿರುಗಿಬಿದ್ದಿದ್ದರು. ಸಿಡಿ ಪ್ರಕರಣದಿಂದ ಹೊರಬರದಂತೆ ಚಕ್ರವ್ಯೂಹ ರಚಿಸಿದ್ದಾರೆ. ವಿಪಕ್ಷಗಳ ಜತೆಗೆ ಸ್ವಪಕ್ಷೀಯರೂ ಖೆಡ್ಡಾ ತೋಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ಗೆ ದೂರು ಹೇಳಿದ್ದರು. ಸಿಡಿ ಪ್ರಕರಣ 15 ದಿನದಲ್ಲಿ ಮುಕ್ತಾಯ ಆಗುತ್ತೆಂದು ಹೇಳಿದ್ದರು. ನಾನು ಮತ್ತೆ ಸಚಿವನಾಗುತ್ತೇನೆ ಎಂದು ಭರವಸೆ ನೀಡಿದ್ದರು. ಸಿಡಿ ಪ್ರಕರಣದ ತನಿಖೆಯನ್ನು ಬೇಗ ಮುಗಿಸದೆ ವಿಳಂಬ ಮಾಡುತ್ತಿದ್ದಾರೆ. ವಿಪಕ್ಷಗಳ ಜತೆ ನಮ್ಮವರು ಸೇರಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ ಭೇಟಿ ವೇಳೆ ರಮೇಶ್ ಜಾರಕಿಹೊಳಿ ದೂರಿದ್ದರು.