ಹುಬ್ಬಳ್ಳಿ: ಕೊರೊನಾ ಕರ್ಫ್ಯೂ ಬಿಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವರು ನಕಲಿ ಐಡಿ ಕಾರ್ಡ್‌ಗಳನ್ನು ತೋರಿಸಿ ಓಡಾಡುತ್ತಿರುವುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಮಂಗಳವಾರ ಚನ್ನಮ್ಮ ವೃತ್ತದಲ್ಲಿ ಖಾಸಗಿ ವಾಹಿನಿಯೊಂದರ ನಕಲಿ ಗುರುತಿನ ಚೀಟಿ ತೋರಿಸಿ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.
ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಬಿಗಿಗೊಳಿ ಸಲಾಗುತ್ತಿದೆ. ಚೆಕ್‌ಪೋಸ್ಟ್ ಗಳನ್ನು ಬಿಗಿಗೊಳಿಸಲಾಗುತ್ತಿದೆ. ಅನಗತ್ಯ ಸಂಚಾರ ಎಂದು ಕಂಡುಬಂದರೆ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಹೀಗಾಗಿ ಪೊಲೀಸರ ಕಣ್ಣು ತಪ್ಪಿಸಿ ತಿರುಗಾಡಲು ಕೆಲವರು ನಕಲಿ ಐಡಿ ಕಾರ್ಡ್‌ಗಳನ್ನು ಬಳಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪ್ರತಿಯೊಂದು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಗುರುತಿನ ಚೀಟಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಚನ್ನಮ್ಮ ವೃತ್ತದಲ್ಲಿ ಖಾಸಗಿ ವಾಹಿನಿಯ ಐಡಿ ಕಾರ್ಡ್ ಧರಿಸಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಸಂಚಾರ ಮಾಡುತ್ತಿದ್ದ. ಈ ವೇಳೆ ಸ್ಥಳದಲ್ಲಿದ್ದ ಡಿಸಿಪಿ ಕೆ.ರಾಮರಾಜನ್ ಹಾಗೂ ಉಪನಗರ ಠಾಣೆ ಇನ್ಸ್ ಪೆಕ್ಟರ್ ರವಿಚಂದ್ರ ಅವರು ಯುವಕನ ಗುರುತಿನ ಚೀಟಿ ತಪಾಸಣೆ ಮಾಡಿದ್ದಾರೆ. ಈ ವೇಳೆ ಅನುಮಾನ ಬಂದು ವಾಹಿನಿ, ಹುದ್ದೆ ಕುರಿತು ಪ್ರಶ್ನಿಸಿದ್ದಾರೆ. ಉತ್ತರಿಸಲು ತಡವರಿಸಿದಾಗ ಇದು ನಕಲಿ ಕಾರ್ಡ್ ಎನ್ನುವುದು ಖಾತ್ರಿಯಾಗಿದೆ. ಕೂಡಲೇ ಅಲ್ಲಿದ್ದ ಕೆಲ ಪತ್ರಕರ್ತರನ್ನು ಕರೆದು ಯುವಕನ ಪರಿಚಯದ ಕುರಿತು ಪ್ರಶ್ನಿಸಿದ್ದಾರೆ. ಈ ವಾಹಿನಿ ಸ್ಥಗಿತಗೊಂಡಿದ್ದು, ಯುವಕ ಯಾವ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದಂತೆ ಯುವಕನನ್ನು ವಶಕ್ಕೆ ಪಡೆದು ಬೈಕ್ ಜಪ್ತಿ ಮಾಡಿದರು.
ಗುರುತಿನ ಚೀಟಿ ತಪಾಸಣೆಗೆ ಆಯುಕ್ತರ ಸೂಚನೆ: ನಕಲಿ ಗುರುತಿನ ಚೀಟಿ, ಅಗತ್ಯ ಇಲ್ಲದಿದ್ದರೂ ಗುರುತಿನ ಚೀಟಿ ಧರಿಸಿ ರಸ್ತೆಗೆ ಬರುವುದು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗುರುತಿನ ಚೀಟಿ ತಪಾಸಣೆ, ಹೊರಗೆ ಬಂದಿರುವುದು ಅಗತ್ಯ ಕಾರ್ಯಕ್ಕೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಅವಶ್ಯವಿದ್ದರೆ ಫೋನ್ ಕರೆ ಮಾಡಿ ಸ್ಪಷ್ಟಪಡಿಸಿಕೊಂಡು ಮುಂದೆ ಹೋಗಲು ಅವಕಾಶ ನೀಡಬೇಕು. ಇಲ್ಲದಿದ್ದರೆ ವಾಹನ ಜಪ್ತಿ ಮಾಡುವಂತೆ ಮಹಾನಗರ ಪೊಲೀಸ್ ಆಯುಕ್ತ ಲಾಭೂ ರಾಮ ಅವರು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಚೆಕ್ ಪೋಸ್ಟ್‌ಗಳಲ್ಲಿ ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡುವ ಕೆಲಸ ಮಾಡುತ್ತಿದ್ದಾರೆ.
ಮಧ್ಯಾಹ್ನದ ನಂತರ ವಾಹನಗಳ ಸಂಚಾರ ಹೆಚ್ಚಳ: ಬೆಳಿಗ್ಗೆ 6 ಗಂಟೆಯಿಂದ ಪೊಲೀಸರು ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಮಧ್ಯಾಹ್ನ 12 ಗಂಟೆವರೆಗೆ ಪೊಲೀಸರು ಚೆಕ್‌ಪೋಸ್ಟ್ ಗಳನ್ನು ಬಿಗಿ ಮಾಡಿರುತ್ತಾರೆ. ನಿರಂತರ ಕೆಲಸದ ಬಳಲಿಕೆಯಿಂದ ಬಿಸಿಲಿಗೆ ನಿಂತುಕೊಳ್ಳಲು ಸಾಧ್ಯವಾಗದೆ ಕೊಂಚ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಈ ಸಮಯ ನೋಡಿಕೊಂಡು ಒಂದಿಷ್ಟು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೋಟೆಲ್ ಪಾರ್ಸಲ್, ಮೆಡಿಕಲ್ ನೆಪ ಹೇಳಿ ಕಾರು-ಬೈಕ್‌ಗಳ ಮೂಲಕ ಓಡಾಡುವುದು ಹೆಚ್ಚಾಗುತ್ತಿದೆ. ಇನ್ನೂ ಚೆಕ್‌ಪೋಸ್ಟ್‌ಗಳಲ್ಲಿನ ಪೊಲೀಸರನ್ನು ತಪ್ಪಿಸಿ ಅಲ್ಲಲ್ಲಿ ಓಡಾಡುತ್ತಿರುವುದು ಹೆಚ್ಚಾಗುತ್ತಿದೆ.