Breaking News

She for Society: ಕೊರೋನಾ ವಾರಿಯರ್ಸ್ ಆದ ಬೆಂಗಳೂರಿನ ಮಹಿಳಾ ಬೈಕರ್ಸ್; ಸೋಂಕಿತರಿಗೆ ಉಚಿತ ಆಂಬುಲೆನ್ಸ್ ಸೇವೆ…

Spread the love

ಕೊರೋನಾ ವಿರುದ್ಧದ ಹೋರಾಟಕ್ಕೆ ಹಲವಾರು ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಅವುಗಳಲ್ಲಿ ಬೆಂಗಳೂರಿನ ಮಹಿಳಾ ಬೈಕರ್‌ಗಳ ತಂಡ ಕೂಡ ಒಂದು. ಹೌದು, ಕಳೆದ ಒಂದು ವಾರದಿಂದ ಉಚಿತ ಆಂಬುಲೆನ್ಸ್ ಸೇವೆ ನೀಡುತ್ತಿರುವ ಈ ಲೇಡಿ ಬೈಕರ್ಸ್ ಗ್ಯಾಂಗ್ ಎಲ್ಲರಿಗೂ ಮಾದರಿಯಾಗಿದೆ. ‘ಶೀ ಫಾರ್ ಸೊಸೈಟಿ’ ಸೈನಿಕರ ಹಾಗೂ ಸೈನಿಕರ ಕುಟುಂಬಗಳಿಗೆ ನೆರವಾಗಲು ಕೆಲ ವರ್ಷಗಳ ಹಿಂದೆ ಪ್ರಾರಂಭವಾದ ತಂಡ. ಹರ್ಷಿಣಿ ವೆಂಕಟೇಶ್ ಸಾರಥ್ಯದಲ್ಲಿ ಹತ್ತು ಜನರ ಮಹಿಳಾ ಬೈಕರ್‌ಗಳು ಸೇರಿ ಸೈನಿಕರು, ಅವರ ಕುಟುಂಬದವರಿಗೆ ನೆರವಾಗಲು, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಲು ಈ ತಂಡವನ್ನು ಮಾಡಿಕೊಂಡಿದ್ದಾರೆ. ವಿಶೇಷ ಅಂದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರಿಗೆ ಆಂಬುಲೆನ್ಸ್​ಗಳ ಕೊರತೆ ಇರುವುದನ್ನು ಮನಗಂಡು ‘ಶೀ ಫಾರ್ ಸೊಸೈಟಿ’ ಟೀಮ್ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ ಆರು ಜನರಿಗೆ ಉಚಿತ ಆಂಬುಲೆನ್ಸ್ ಸೇವೆ ನೀಡಲಾಗುತ್ತಿದೆ. ಈ ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಸಪೋರ್ಟ್ ಕೂಡ ಇದ್ದು, ಆಸ್ಪತ್ರೆಯಿಂದ ಆಸ್ಪತ್ರೆಗೆ ಕೋವಿಡ್ ಸೋಂಕಿತರನ್ನು ಶಿಫ್ಟ್ ಮಾಡುವುದು ಹಾಗೂ ಮನೆಯಿಂದ ಆಸ್ಪತ್ರೆಗೆ ಕರೆತರುವ ಕೆಲಸ ಮಾಡಲಾಗುತ್ತಿದೆ. ಆ ಮೂಲಕ ತಮ್ಮದೇ ರೀತಿಯಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ ಬೆಂಗಳೂರಿನ ಈ ಮಹಿಳಾ ಬೈಕರ್‌ಗಳು.

ಕಳೆದ ವರ್ಷ ಕೂಡ ‘ಶೀ ಫಾರ್ ಸೊಸೈಟಿ’ ತಂಡ ಕೊರೋನಾದ ಕಷ್ಟದ ಸಮಯದಲ್ಲಿ ನಾನಾ ರೀತಿಗಳಲ್ಲಿ ಜನರಿಗೆ ನೆರವಾಗಿದ್ದರು. ಮಂಗಳ ಮುಖಿಯರಿಗೆ ರೇಷನ್ ಕಿಟ್ ಹಂಚಿದ್ದರು. ಹಿರಿಯ ನಾಗರಿಕರಿಗೆ ಔಷಧಿ ತಲುಪಿಸುವ ಜವಾಬ್ದಾರಿಯನ್ನೂ ಹೊತ್ತಿದ್ದರು. ಆ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು. ಹಾಗೇ ಇದೇ ಜನವರಿ ತಿಂಗಳಲ್ಲಿ ಕೋಲಾರಕ್ಕೆ ಬೈಕ್‌ನಲ್ಲಿ ತೆರಳಿ ನೂರು ಮಂದಿ ಸೈನಿಕರ ಕುಟುಂಬಗಳಿಗೆ ಗೌರವ ಸಲ್ಲಿಸಿ, ಎಲ್ಲರಿಗೂ ಉಚಿತವಾಗಿ ಸೋಲಾರ್ ಪ್ಯಾನೆಲ್ ಕಿಟ್ ನೀಡಿದ್ದರು. ಹೀಗೆ ನಾನಾ ರೀತಿಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದೆ ‘ಶೀ ಫಾರ್ ಸೊಸೈಟಿ’ ತಂಡ.

ಇನ್ನು ಈಗ ಎರಡನೇ ಅಲೆಯ ತೀವ್ರತೆಗೆ ಇಡೀ ವಿಶ್ವವೇ ತತ್ತರಿಸಿದೆ. ಭಾರತದಲ್ಲಂತೂ ಪ್ರತಿದಿನ ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮತ್ತೊಂದೆಡೆ ರಾಜ್ಯದಲ್ಲೂ ಹಿಂದೆಂದಿಗಿಂತಲೂ ಹೆಚ್ಚು ಪ್ರಕರಣಗಳು ವರದಿ ಆಗುತ್ತಿದೆ., ದೇಶದಲ್ಲೂ ಬೆಂಗಳೂರು ನಗರವೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ದಾಖಲಿಸುವ ಮೂಲಕ ಸುದ್ದಿಯಾಗಿದೆ. ಇನ್ನು ಪ್ರಕರಣಗಳು ಹೆಚ್ಚಾದಂತೆ ಖಾಸಗಿ ಆಂಬುಲೆನ್ಸ್​ಗಳ ಆಟವೂ ಜೋರಾಗಿಯೇ ನಡೀತಿದೆ. ಸೋಂಕಿತರ ಕುಟುಂಬಗಳಿಂದ ಕೇವಲ ಐದು, ಆರು ಕಿಲೋಮೀಟರ್ ಸಂಚರಿಸಲೂ ಹತ್ತು, ಹದಿನೈದು ಸಾವಿರ ರೂಪಾಯಿ ಸುಲಿಗೆ ಮಾಡಿರುವ ಹಲವು ನಿದರ್ಶನಗಳೂ ನಡೆದು ಹೋಗಿವೆ. ಇಂತಹ ಘಟನೆಗಳನ್ನು ನೋಡಿ ಸಾಕಾಗಿ ಈಗ ‘ಶೀ ಫಾರ್ ಸೊಸೈಟಿ’ ಮಹಿಳಾ ಬೈಕರ್ಸ್ ತಂಡ, ಉಚಿತ ಆಂಬುಲೆನ್ಸ್ ಸೇವೆ ಆರಂಭಿಸುವ ಮೂಲಕ ನೆರವಿಗೆ ಆಗಮಿಸಿದೆ.

ಇದೇ ಮೇ 5ರಂದು ಪ್ರಾರಂಭವಾದ ‘ಶೀ ಫಾರ್ ಸೊಸೈಟಿ’ಯ ಉಚಿತ ಆಂಬುಲೆನ್ಸ್ ಸದ್ಯ ಒಂದು ತಿಂಗಳ ಕಾಲ ಅರ್ಥಾತ್ ಜೂನ್ 5ರವರೆಗೆ ಸೇವೆಯನ್ನು ನೀಡಲಿದೆ. ಆ ಬಳಿಕವೂ ಆಂಬುಲೆನ್ಸ್ ಸಮಸ್ಯೆ ಬೆಂಗಳೂರಿನಲ್ಲಿ ಮುಂದುವರೆದಲ್ಲಿ ಮತ್ತೆ ಸೇವೆಯನ್ನೂ ಮುಂದುವರೆಸುವ ಯೋಜನೆ ಈ ತಂಡದ್ದು. ಒಟ್ಟಾರೆ ಶೀ ಫಾರ್ ಸೊಸೈಟಿಯ ಮಹಿಳಾ ಬೈಕರ್‌ಗಳ ತಂಡ ಕೊರೊನಾದಂತಹ ಕಷ್ಟ ಕಾಲದಲ್ಲಿ ತಮ್ಮದೇ ರೀತಿಯಲ್ಲಿ ಜನಮುಖಿ ಕೆಲಸಗಳ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.


Spread the love

About Laxminews 24x7

Check Also

ಬೆಂಗಳೂರಲ್ಲಿ ಮುಂಬೈ ಮಾದರಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಸಿಎಂ ಸೂಚನೆ

Spread the love ಬೆಂಗಳೂರು: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜಿಬಿಎ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ