ರಾಯ್ಪುರ್: ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು 800 ಕಿ.ಮೀ ನಡೆದುಕೊಂಡೇ ತೆರಳಲು ನಿರ್ಧರಿಸಿ ಹೊರಟಿದ್ದಾರೆ.
ಗಮನಾರ್ಹ ವಿಷಯವೆಂದರೆ ಭಗವಾನ್ ರಾಮನ ತಾಯಿ ಕೌಸಲ್ಯೆ ಹುಟ್ಟಿದ್ದು ಛತ್ತೀಸ್‍ಗಢದ ಚಂದ್ಖುರಿಯಲ್ಲಿ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಇದೇ ಗ್ರಾಮದ ನಿವಾಸಿ ಮೊಹಮ್ಮದ್ ಫಯಾಝ್ ಖಾನ್ ಅವರು ಶ್ರೀರಾಮನ ಪರಮ ಭಕ್ತನಾಗಿದ್ದಾರೆ.
ಮಧ್ಯಪ್ರದೇಶಕ್ಕೆ ತಲುಪಿದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಫಯಾಜ್ ಖಾನ್, ನನ್ನ ಹೆಸರು ಹಾಗೂ ಧರ್ಮದಲ್ಲಿ ನಾನೊಬ್ಬ ಮುಸ್ಲಿಂ. ಆದರೆ ನನ್ನ ದೇವರು ರಾಮ. ನಾನು ರಾಮನ ಪರಮಭಕ್ತನಾಗಿದ್ದೇನೆ. ನಮ್ಮ ಪೂರ್ವಜರ ಬಗ್ಗೆ ತಿಳಿದುಕೊಂಡರೆ ಅವರು ಹಿಂದೂಗಳಾಗಿರಬಹುದು. ಅಲ್ಲದೆ ಅವರ ಹೆಸರು ರಾಮ್‍ಲಾಲ್ ಅಥವಾ ಶ್ಯಾಮ್‍ಲಾಲ್ ಆಗಿರಬಹುದು. ನಾವು ಚರ್ಚ್ ಅಥವಾ ಮಸೀದಿಗೇ ಹೋಗಲಿ ಆದರೆ ನಾವೆಲ್ಲರೂ ಹಿಂದೂ ಮೂಲವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ನಮ್ಮ ಮುಖ್ಯ ಪೂರ್ವಜ ಭಗವಾನ್ ರಾಮನಾಗಿದ್ದಾನೆ. ಅಲ್ಲಮ ಇಕ್ಬಾಲ್(ಪಾಕಿಸ್ತಾನಿ ರಾಷ್ಟ್ರೀಯ ಕವಿ) ಅವರು ಅವರದ್ದೇ ಆದ ರೀತಿಯಲ್ಲಿ ವಿವರಣೆ ನೀಡಲು ಪ್ರಯತ್ನಿಸಿದ್ದರು. ರಾಮನನ್ನು ಭಾರತದ ಅಧಿಪತಿ ಅಥವಾ ದೊರೆ ಎಂದು ಪರಿಗಣಿಸುತ್ತಾರೆ ಎಂದು ಹೇಳಿದ್ದರು. ಇದೇ ಪೂಜ್ಯ ಭಾವದಿಂದ ಇಂದು ನಾನು ಕೌಸಲ್ಯೆ ಹುಟ್ಟಿದ ಸ್ಥಳ ಎಂದು ನಂಬಲಾಗಿರುವ ಚಂದ್ಖುರಿಯಿಂದ ಅಯೋಧ್ಯೆಗೆ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಖಾನ್ ಹೇಳಿದರು.