ಹುಬ್ಬಳ್ಳಿ: ಲಾಕ್‍ಡೌನ್ ಪರಿಣಾಮ ಕಳೆದ ನಾಲ್ಕು ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಎಸಿ ಬಸ್‍ಗಳ ಸಂಚಾರವನ್ನು ಸರ್ಕಾರದ ಅನುಮತಿ ಮೇರೆಗೆ ಸೋಮವಾರದಿಂದ ಪುನರಾರಂಭಿಸಲಾಗುತ್ತಿದೆ.
ಮೊದಲ ಹಂತದಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಮೈಸೂರಿನ ನಡುವೆ ಎಸಿ ಸ್ಲೀಪರ್ ಮತ್ತು ವೋಲ್ವೋ ಬಸ್‍ಗಳ ಸಂಚಾರ ಆರಂಭಿಸಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.
ಬಸ್ ಹೊರಡುವ ಸಮಯದ ವಿವರ:
ಹುಬ್ಬಳ್ಳಿಯಿಂದ ಬೆಂಗಳೂರಿಗೆ ವೋಲ್ವೊ ಬಸ್ ಮಧ್ಯಾಹ್ನ 3 ಗಂಟೆಗೆ ಮತ್ತು ರಾತ್ರಿ 10.30ಕ್ಕೆ ಹೊರಡುತ್ತದೆ. ಎಸಿ ಸ್ಲೀಪರ್ ಬಸ್ ರಾತ್ರಿ 10.40ಕ್ಕೆ ಹೊರಡುತ್ತದೆ. ಹುಬ್ಬಳ್ಳಿಯಿಂದ ಮೈಸೂರಿಗೆ ಎಸಿ ಸ್ಲೀಪರ್ ರಾತ್ರಿ 9.45ಕ್ಕೆ ಹೊರಡುತ್ತದೆ.
ಎಸಿ ಬಸ್ ಗಳಲ್ಲದೆ, ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುತ್ತಿರುವ ನಾನ್ ಎಸಿ ಸ್ಲೀಪರ್ ಮತ್ತು ರಾಜಹಂಸ ಬಸ್‍ಗಳು ಎಂದಿನಂತೆ ಸಂಚರಿಸಲಿವೆ. ನಾನ್ ಎಸಿ ಸ್ಲೀಪರ್: ರಾತ್ರಿ 8.30, 9 ಹಾಗೂ 10 ಗಂಟೆ ರಾಜಹಂಸ ಸಂಜೆ 7.30 ಗಂಟೆ ಹೊರಡಲಿದೆ.
ಮಾರ್ಗಸೂಚಿಗಳ ಪ್ರಕಾರ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಸ್‍ಗಳನ್ನು ರಸ್ತೆಗಿಳಿಸಲಾಗುತ್ತದೆ. ಬಸ್ ಒಳಗಡೆ ನಿಗದಿತ ತಾಪಮಾನವನ್ನು ನಿರ್ವಹಣೆ ಮಾಡಲಾಗುತ್ತದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಲೀಪರ್ ಬಸ್ಸಿನಲ್ಲಿ 20 ಹಾಗೂ ವೋಲ್ವೋ ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಸುರಕ್ಷತೆಯ ದೃಷ್ಟಿಯಿಂದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಬ್ಲಾಂಕೆಟ್ ಗಳನ್ನು ನೀಡುವುದಿಲ್ಲ. ಮಾರ್ಗ ಮಧ್ಯದಲ್ಲಿ ಊಟೋಪಚಾರಕ್ಕಾಗಿ ನಿಲುಗಡೆ ಇರುವುದಿಲ್ಲ. ಆದ್ದರಿಂದ ಪ್ರಯಾಣಿಕರು ಊಟ, ತಿಂಡಿ ಮತ್ತು ನೀರನ್ನು ಮನೆಯಿಂದಲೇ ತರಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ವಿವರಿಸಿದ್ದಾರೆ.