ಗದಗ(ಜು.23): ಗದಗ ಜಿಲ್ಲೆ ನರಗುಂದ ತಾಲೂಕಿನ ಮೂಗನೂರು ಎನ್ನುವ ಗ್ರಾಮದಲ್ಲಿ ಸಾಕಷ್ಟು ವರ್ಷಗಳ ನಂತರ ಸುಮಾರು ನಲವತ್ತು ಕುಟುಂಬಗಳಿಗೆ ಇಂದಿರಾ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳ ಅನ್ವಯ ಆಶ್ರಯ ಮನೆ ದೊರೆತಿವೆ.
ಮೂಲಭೂತ ಸೌಕರ್ಯಗಳ ಸಮೇತ ಆಶ್ರಯ ಕಾಲೋನಿ ನಿರ್ಮಿತವಾಗಬೇಕಾಗಿತ್ತು. 1995ರಲ್ಲಿಯೇ ಜನತಾ ಮನೆಗಳು ನಿರ್ಮಾಣವಾಗಿವೆ. ಆದರೆ ಅಂದಿನಿಂದ ಈವರೆಗೂ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲಿನ ನಿವಾಸಿಗಳಿಗೆ ಸಿಕ್ಕಿಲ್ಲ. ಮಳೆಗಾಲ ಬಂತೆಂದರೆ ಸಾಕು ಇಲ್ಲಿನ ರಸ್ತೆಗಳೆಲ್ಲ ಕೆಸರುಗದ್ದೆಗಳಾಗಿ ಮಾರ್ಪಾಡಾಗುತ್ತವೆ. ಇಂತಹ ರಸ್ತೆಯಲ್ಲಿಯೇ ಚಿಕ್ಕ ಮಕ್ಕಳು, ವೃದ್ಧರು ಎದ್ದು ಬಿದ್ದು ಸಂಚರಿಸಿ ಸಮಸ್ಯೆ ಅನುಭವಿಸುತ್ತಿದ್ದಾರೆ.
ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಮೂಗನೂರ ಗ್ರಾಮ ಸಾಕಷ್ಟು ನಿರ್ಲಕ್ಷಕ್ಕೊಳಪಟ್ಟಿದೆ. ಸುಮಾರು 25 ವರ್ಷಗಳಾದರು ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲವಂತೆ. ಈಗಾಗಲೇ ಸಾಕಷ್ಟು ಬಾರಿ ಈ ಕುರಿತು ಯಾರೇ ಹತ್ತಿರ ಮನವಿ ಮಾಡಿದರು ಕ್ಯಾರೆ ಎಂದಿಲ್ಲ.
ಕುಡಿಯುವ ನೀರು, ಶೌಚಾಲಯ, ಚರಂಡಿ ವ್ಯವಸ್ಥೆ ಹಾಗೂ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು ನಿವಾಸಿಗಳೆಲ್ಲರು ಇದರಿಂದ ಹೈರಾಣಾಗಿದ್ದಾರೆ. ಮಳೆಗಾಲದಲ್ಲಂತೂ ಮಳೆ ನೀರು ಮನೆಗಳಿಗೆ ನುಗ್ಗಿ ರಸ್ತೆಗಳಿಗೆ ಬಂದು ನಿಲ್ಲುತ್ತದೆ. ಶಾಲೆಗೆ ಹೋಗಬೇಕಾದ ಮಕ್ಕಳು ಹಾಗು ವೃದ್ಧರು ಹಲವು ಸಲ ಈ ರಸ್ತೆಯಲ್ಲಿ ಜಾರಿಬಿದ್ದು ಕೈ ಕಾಲು ಮುರಿದುಕೊಂಡ ಅವಘಢಗಳಾಗಿವೆ.
ಅಲ್ಲದೇ ಇಡೀ ಆಶ್ರಯ ಕಾಲೋನಿ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡ್ತಿದೆ. ಕುಟುಂಬದ ಸದಸ್ಯರು ಒಂದಿಲ್ಲೊಂದು ಖಾಯಿಲೆಯಿಂದ ಬಳಳುತ್ತಿದ್ದು ದಿನವಿಡಿ ಆತಂಕದಲ್ಲೇ ಜೀವನ ನಡೆಸುತ್ತಿದ್ದಾರೆ.