ಬೆಂಗಳೂರು, ಜು.22- ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಲು ಮುಂದಾಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮೊದಲ ಹಂತವಾಗಿ ಇಂದು ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಭೂ ಸುಧಾರಣಾ ಕಾಯ್ದೆ 1971ರ ಸೆಕ್ಷನ್ 63, 79 ಎ, ಬಿ, ಸಿ ಮತ್ತು 80ನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರ ಕೃಷಿಯೇತರ ಆದಾಯ ಇರುವವರು ಎಲ್ಲಿ, ಯಾವ ಭೂಮಿಯನ್ನಾದರೂ ಖರೀದಿಸಬಹುದು ಎಂದು ಕಾನೂನು ಮಾರ್ಪಾಡು ಮಾಡಲಾಗಿದೆ.
ಈ ಮೊದಲು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸಲು ಸಾಕಷ್ಟು ಅಡೆ ತಡೆಗಳಿದ್ದವು. 25 ಲಕ್ಷ ಕೃಷಿಯೇತರ ಆದಾಯ ಇರುವವರು ಕೃಷಿ ಭೂಮಿ ಖರೀದಿಸುವಂತಿರಲಿಲ್ಲ ಮತ್ತು ಪ್ರತಿಯೊಂದು ಕುಟುಂವವೂ 118 ಎಕರೆ ಭೂಮಿ ಹೊಂದಲು ಮಾತ್ರ ಅವಕಾಶ ಇತ್ತು.
ಹೊಸ ತಿದ್ದುಪಡಿಯ ಮೂಲದ ಪ್ರತಿ ಕುಟುಂಬ 432 ಎಕರೆ ಕೃಷಿ ಭೂಮಿ ಹೊಂದಬಹುದು, ಎಷ್ಟೇ ಆದಾಯ ಇದ್ದರೂ ಭೂಮಿ ಖರೀದಿಸಬಹುದು ಎಂದು ಬದಲಾವಣೆ ಮಾಡಲಾಗಿದೆ.
ಈಗಾಗಲೇ ಕೃಷಿಯಲ್ಲಿ ಲಾಭವಿಲ್ಲ ಎಂದು ರೈತರು ಭೂಮಿ ಮಾರಿಕೊಳ್ಳುತ್ತಿದ್ದಾರೆ. ಕಾನೂನಿನ ಅಡೆತಡೆಗಳನ್ನು ತೆಗೆದು ಹಾಕಿರುವುದರಿಂದ ಇನ್ನೂ ಮುಂದೆ ದುಡ್ಡಿರುವ ಮಲ್ಟಿನ್ಯಾಷನಲ್ ಕಂಪೆನಿಗಳು ಕೃಷಿ ಭೂಮಿ ಖರೀದಿಸುತ್ತವೆ.
ಶ್ರೀಮಂತರು ಶೋಕಿಗಾಗಿ ಭೂಮಿ ಖರೀದಿ ಮಾಡುತ್ತಾರೆ. ಕೃಷಿ ಭೂಮಿ ಕಡಿಮೆಯಾಗಲಿದೆ. ಕೃಷಿ ಉತ್ಪನ್ನಗಳು ಕುಂಠಿತಗೊಂಡು ಆಹಾರ ಸ್ವಾಲಂಬನೆಗೆ ಹೊಡೆತ ಬೀಳಲಿದೆ, ಭೂಮಿ ಕಳೆದುಕೊಳ್ಳುವ ರೈತರು ನಿರ್ಗತಿಕರಾಗಲಿದ್ದಾರೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಹಾಗಾಗಿ ಕಾಂಗ್ರೆಸ್ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ಬಲವಾಗಿ ವಿರೋಧಿಸುತ್ತಿದ್ದು, ಸರ್ಕಾರದ ನಿರ್ಧಾರವನ್ನು ಜನಪರ ಚಳವಳಿಯನ್ನಾಗಿ ರೂಪಿಸಲು ಮುಂದಾಗಿದೆ. ಗ್ರಾಮ ಪಂಚಾಯತ್ ಮಟ್ಟದಿಂದ ಹೋರಾಟ ಸಂಘಟಿಸಲು ಕಾಂಗ್ರೆಸ್ ಮುಂದಾಗಿದೆ.
ಇದನ್ನು ಕೇವಲ ಪಕ್ಷದ ಹೋರಾಟವನ್ನಾಗಿಸದೆ ವಿವಿಧ ಸಂಘಟನೆಗಳ ಚಳವಳಿಯನ್ನಾಗಿ ಮಾಡುವ ತಯಾರಿ ನಡೆದಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ಇಂದು ಸಿದ್ದರಾಮಯ್ಯ ರೈತ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಮುಂದಿನ ಹಂತದಲ್ಲಿ ದಲಿತ ಹಾಗೂ ಕನ್ನಡ ಪರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿ, ಇತರ ಸಮಾನ ಮನಸ್ಕ ಪಕ್ಷಗಳ ಜೊತೆಯಲ್ಲೂ ಚರ್ಚೆ ನಡೆಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ,
ಇಂದು ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ರೈತ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾಯ್ದೆ ಬದಲಾವಣೆಯಿಂದ ಸುಮಾರು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಭೂಮಿಯ ಮೇಲಿನ ಪ್ರರಕಣಗಳು ರದ್ದುಗೊಳ್ಳಲಿವೆ.
ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಪರಭಾರೆ ನಡೆಯಲಿದೆ. ಇದರಿಂದ ಶ್ರೀಮಂತರಿಗೆ ಅನುಕೂಲವಾಗಲಿದೆ. ಬಡ ವರ್ಗಕ್ಕೆ ಅನ್ಯಾಯವಾಗಲಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತ ಪಡಿಸಿದರು.
ಕೊರೊನಾ ಸಂದರ್ಭದಲ್ಲಿ ಜನ ಬೀದಿಗಿಳಿದು ಹೋರಾಟ ನಡಸಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಇದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ರೈತ ಸಂಘಟನೆಗಳ ಮುಖಂಡರು ಸಿದ್ದರಾಮಯ್ಯ ಅವರ ಮಾತಿಗೆ ಬೆಂಬಲ ವ್ಯಕ್ತ ಪಡಿಸಿದರು.