ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್‍ಗೆ ಬಲಿಯಾಗುವ ಕೆಲವೇ ನಿಮಿಷಗಳ ಮೊದಲು ಸೆಲ್ಫಿ ವಿಡಿಯೋ ಮಾಡಿ 26 ವರ್ಷದ ಯುವಕನೊಬ್ಬ ತನ್ನ ತಂದೆಗೆ ಕಳುಹಿಸಿದ ಕರುಣಾಜನಕ ಘಟನೆಯೊಂದು ನಡೆದಿದೆ.
ಹೌದು. ಯುವಕನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಹೈದರಾಬಾದ್ ನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಶುಕ್ರವಾರ ರಾತ್ರಿ ಯುವಕ ತನ್ನ ತಂದೆ ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿದ್ದಾನೆ. ವಿಡಿಯೋದಲ್ಲಿ ಆಸ್ಪತ್ರೆಯ ಬೆಡ್ ನಲ್ಲಿ ಯುವಕ ಮಲಗಿದ್ದಾನೆ. ಅಲ್ಲದೆ ವೈದ್ಯರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನಗೆ ಉಸಿರಾಡಲು ಕಷ್ಟವಾಗುತ್ತಿದೆ. ಬೈ ಡ್ಯಾಡಿ ಎಂದು ಹೇಳಿರುವುದು ಕಣ್ಣೀರು ತರಿಸುತ್ತಿದೆ. ಭಾನುವಾರದಿಂದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕಳೆದ ಮೂರು ಗಂಟೆಗಳಿಂದ ವೈದ್ಯರು ಆಕ್ಸಿಜನ್ ಸಹಾಯ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಯುವಕ ವಿಡಿಯೋದಲ್ಲಿ ಆರೋಪಿಸಿದ್ದಾನೆ. ಅವರು ವೆಂಟಿಲೇಟರ್ ತೆಗೆದು ಹಾಕಿದ್ದಾರೆ. ಹೀಗಾಗಿ ನನ್ನ ಹೃದಯಬಡಿತ ನಿಂತು ಹೋಗಿದ್ದು, ಸದ್ಯ ಶ್ವಾಸಕೋಶ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಒಟ್ಟಿನಲ್ಲಿ ನನಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಡ್ಯಾಡಿ. ಬೈ ಡ್ಯಾಡಿ, ಬೈ ಆಲ್, ಬೈ ಡ್ಯಾಡಿ ಅಂತ ಯುವಕ ಗೋಗರೆದ ದೃಶ್ಯ ಮನಕಲುಕುವಂತಿದೆ.
ಕೊರೊನಾಗೆ ಬಲಿಯಾದ ಯುವಕನ ಅಂತ್ಯಸಂಸ್ಕಾರವನ್ನು ಶನಿವಾರ ತಂದೆಯೇ ನೆರವೇರಿಸಿದ್ದಾರೆ. ಮಗ ತನ್ನ ಉಸಿರು ನಿಲ್ಲಿಸುವ ಕೆಲ ನಿಮಿಷಗಳ ಮೊದಲು ನನಗೆ ವಿಡಿಯೋ ಕಳುಹಿಸಿದ್ದನು ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಜೂನ್ 24ರಂದು ತೀವ್ರವಾಗಿ ಬಳಲುತ್ತಿದ್ದ ನನ್ನ ಮಗನನ್ನು ನಗರದಲ್ಲಿರುವ ಚೆಸ್ಟ್ ಆಸ್ಪತ್ರೆಯಲ್ಲಿ ದಾಖಲಿಸಿದ್ದೆವು. ಆದರೆ ಇದೀಗ ನಮಗೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಆರೋಪ ತಳ್ಳಿಹಾಕಿದ ಆಸ್ಪತ್ರೆ ಮೇಲ್ವಿಚಾರಕ:
ವೆಂಟಿಲೇಟರ್ ತೆಗೆದುಹಾಕಿರುವ ವಿಚಾರವನ್ನು ಆಸ್ಪತ್ರೆಯ ಮೇಲ್ವಿಚಾರಕ ಮೆಹಬೂಬ್ ಖಾನ್ ತಳ್ಳಿ ಹಾಕಿದ್ದಾರೆ. ರೋಗಿಯ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಹೀಗಾಗಿ ಆತನಿಗೆ ಆಕ್ಸಿಜನ್ ಸಹಾಯ ನೀಡಲು ಸಾಧ್ಯವಾಗಿಲ್ಲ. ಹೃದಯಾಘಾತವೇ ಆತನ ಸಾವಿಗೆ ಕಾರಣ. ಯುವಕನನ್ನು ಉಳಿಸಿಕೊಳ್ಳಲು ನಮ್ಮ ಆಸ್ಪತ್ರೆಯ ಸಿಬ್ಬಂದಿ ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.