ಮುಂಬೈ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ನಾವು ಕೋವಿಡ್ 19 ನಿಂದ ಮುಕ್ತರಾಗುತ್ತೇವೆ ಎಂದು ಕೆಲವರು ಅಂದುಕೊಂಡಿದ್ದಾರೆ ಅಂತ ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ವ್ಯಂಗ್ಯವಾಡಿದ್ದಾರೆ.ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡಲಿದ್ದಾರೆ. ಈ ಸಂಬಂಧ ಮಾಧ್ಯಮಗಳು ಶರದ್ ಪವಾರ್ ಅವರ ಅಭಿಪ್ರಾಯ ಕೇಳಿದಾಗ, ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವುದು ಮಹಾರಾಷ್ಟ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಈ ಮಧ್ಯೆ ಕೆಲವರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿದರೆ ದೇಶದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಭಾವಿಸಿದ್ದಾರೆ ಅಂತ ಲೇವಡಿ ಮಾಡಿದ್ದಾರೆ.
ನಾವು ಯಾವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯಾವಾಗಲೂ ಯೋಚಿಸುತ್ತಿರುತ್ತೇವೆ. ಹಾಗೆಯೇ ಸದ್ಯ ನಾವು ಕೊರೊನಾ ಎಂಬ ವೈರಸನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಸದ್ಯ ನಮಗೆ ಕೊರೊನಾದೊಂದಿಗೆ ಹೋರಾಡುವುದೇ ಮುಖ್ಯವಾಗಿದೆ. ಯಾಕಂದ್ರೆ ಕೊರೊನಾದಿಂದಾಗಿ ಲಾಕ್‍ಡೌನ್ ಜಾರಿಗೊಳಿಸಬೇಕಾಯಿತು. ಇದು ಸಣ್ಣ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ. ಈ ಬಗ್ಗೆ ನಮಗೆ ಕಾಳಜಿ ಇದೆ. ಅದಕ್ಕಾಗಿಯೇ ಈ ವಿಚಾರದ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ನಾನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಳಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಒಟ್ಟಿನಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಜನ ಹೇಗೆ ಹೊರಬರಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿ ಚರ್ಚೆಯಾಗಬೇಕು ಎಂದು ಪವಾರ್ ಒತ್ತಾಯಿಸಿದರು.
ಇದೆ ವೇಳೆ ಶಿವಸೇನೆ ಪಕ್ಷದ ದಕ್ಷಿಣ ಮುಂಬೈ ಸಂಸದ ಅರವಿಂದ್ ಸಾವಂತ್, ಶ್ರೀರಾಮ ನಮ್ಮ ನಂಬಿಕೆಯ ವಿಷಯ. ಈ ವಿಚಾರದಲ್ಲಿ ಯಾವುದೇ ರಾಜಕೀಯ ನಡೆಸಲು ನಾವು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯಾಗುವ ಮೊದಲು ಹಾಗೂ ಅಧಿಕಾರ ಸ್ವೀಕರಿಸಿದ ಬಳಿಕ ಊದ್ಧವ್ ಠಾಕ್ರೆ ಅವರು ಅಯೋಧ್ಯೆಗೆ ಭೇಟಿ ನೀಡಿದ್ದರು ಎಂದು ಸಾವಂತ್ ತಿಳಿಸಿದ್ದಾರೆ.
https://www.facebook.com/105350550949710/posts/182550533229711/?sfnsn=wiwspwa&extid=6t4sF6SpEUiu4l3s&d=w&vh=e