ಮಡಿಕೇರಿ: ಬಾಲಕಿಗೆ ಕೊರೊನಾ ವರದಿ ನೆಗೆಟಿವ್ ಬಂದ್ರೂ ಗ್ರಾಮ ಸೀಲ್‍ಡೌನ್ ಮಾಡಿದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಜನತಾ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಮೂರು ದಿನಗಳ ಕಳೆದಿವೆ. ಜನತಾ ಕಾಲೋನಿಯ 17 ವರ್ಷದ ಯುವತಿಗೆ ಕೊರೊನಾ ಸೋಂಕು ಇದೆ ಎಂದು ಶಂಕಿಸಲಾಗಿತ್ತು. ಆದ್ರೆ ಪರೀಕ್ಷೆಗೆ ಒಳಪಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿದೆ. ಇಂದಿಗೂ ಸೀಲ್‍ಡೌನ್ ಮಾಡಿರುವ ಗ್ರಾಮವನ್ನು ತೆರವು ಮಾಡದೇ ಇರುವುದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಸೀಲ್‍ಡೌನ್ ಮಾಡಿದ ಪ್ರದೇಶದಲ್ಲಿ ಜಿಲ್ಲಾಡಳಿತದಿಂದಲೂ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿಲ್ಲ. ಈ ಭಾಗದಲ್ಲಿ ವಾಸ ಮಾಡುವ ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ದಿನದ ಸಂಬಳದ ಮೇಲೆ ಜೀವನ ನಡೆಸುತ್ತಿದ್ದಾರೆ. ಇತ್ತ ಅಗತ್ಯ ವಸ್ತುಗಳನ್ನು ನೀಡದೇ, ಗ್ರಾಮದಿಂದ ಹೊರಕ್ಕೆ ಹೋಗಲು ಸಹ ಬಿಡದೇ ಇರೋದರಿಂದ ಗ್ರಾಮಸ್ಥರು ಕಷ್ಟದಲ್ಲಿ ಸಿಲುಕಿದ್ದಾರೆ.
ನೆಗೆಟಿವ್ ವರದಿ ಬಂದರು ಸೀಲ್ ಡೌನ್ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಲಿ ಕೆಲಸಕ್ಕೆ ತೆರಳಿದ್ರೆ ಜೀವನ ನಡೆಸಲು ಸಾಧ್ಯ. ಹೀಗೆ ಮಾಡಿದ್ರೆ ಕಷ್ಟವಾಗುತ್ತದೆ ಎಂದು ಕಾಲೋನಿಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.