ಬೆಂಗಳೂರು: ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದ್ವೇಷ ಭಾಷಣ ತಡೆ, ಸಾಮಾಜಿಕ ಬಹಿಷ್ಕಾರ ತಡೆ ಮಸೂದೆ ಸೇರಿ ಒಟ್ಟು 8 ಮಸೂದೆಗಳಿಗೆ ಒಪ್ಪಿಗೆ ಸೂಚಿಸಲಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು.
ಪ್ರಮುಖವಾಗಿ ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ನಿಯಂತ್ರಣಕ್ಕೆ ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ಕ್ಕೆ ಅನುಮೋದನೆ ನೀಡಿದೆ. ಬೆಳಗಾವಿ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ. ರಾಜ್ಯದಲ್ಲಿ ದ್ವೇಷ ಭಾಷಣಕ್ಕೆ ಅಂಕುಶ ಹಾಕಲು ಸರ್ಕಾರ ಮುಂದಾಗಿದೆ. ದ್ಚೇಷ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಅಶಾಂತಿ, ಕೋಮುಗಲಭೆ, ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ವಿಧೇಯಕ ತರಲು ತೀರ್ಮಾನಿಸಿದೆ. ಕಳೆದ ಜೂನ್ನಲ್ಲಿ ಈ ವಿಧೇಯಕ ಸಚಿವ ಸಂಪುಟ ಸಭೆಯ ಮುಂದೆ ಬಂದಿತ್ತು. ಆದರೆ, ಕೆಲ ವಿಚಾರಗಳ ಬಗ್ಗೆ ಗೊಂದಲ, ಸ್ಪಷ್ಟನೆ ಬೇಕಿದ್ದರಿಂದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಜನಾಂಗೀಯ ನಿಂದನೆ, ಭಾಷೆ, ಜನ್ಮಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಅಪರಾಧ ಮತ್ತು ದ್ವೇಷ ಭಾಷಣ ಮಾಡುವುದು ಈ ವಿಧೇಯಕದಡಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಪ್ರಸ್ತಾಪಿತ ಮಸೂದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು, ಸರ್ಚ್ ಇಂಜಿನ್‌ಗಳು, ಟೆಲಿಕಾಂ ಆಪರೇಟರ್‌ಗಳು, ಆನ್‌ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ಸೇರಿ ಡಿಜಿಟಲ್ ಮಧ್ಯವರ್ತಿಗಳು ಪೋಸ್ಟ್ ಮಾಡುವ ವಿಷಯಕ್ಕೆ ಹೊಣೆಗಾರರಾಗಿರುತ್ತಾರೆ. ಜಿಲ್ಲಾಧಿಕಾರಿಗಳಿಗೆ ಕೋಮುಗಲಭೆಯ ಅಪಾಯವಿರುವ ಪ್ರದೇಶಗಳಲ್ಲಿ ಪ್ರಚೋದನಕಾರಿ ಹೇಳಿಕೆ ತಡೆಗಟ್ಟುವ ಆದೇಶ ನೀಡಲು ಅಧಿಕಾರ ನೀಡಲಾಗುವುದು. ಜಿಲ್ಲಾಧಿಕಾರಿಗಳು ಆದೇಶದ ಮೂಲಕ ಸಭೆಗಳು, ಮೆರವಣಿಗೆಗಳು, ಧ್ವನಿವರ್ಧಕಗಳ ಬಳಕೆ ಅಥವಾ ಭಯ, ದ್ವೇಷ ಪ್ರಚೋದಿಸುವ ಯಾವುದೇ ಕ್ರಿಯೆಯನ್ನು ನಿಷೇಧಿಸಬಹುದಾಗಿದೆ. ಈ ನಿರ್ಬಂಧಗಳನ್ನು ಮೊದಲಿಗೆ 30 ದಿನಗಳವರೆಗೆ ವಿಧಿಸಬಹುದು, ಅವಶ್ಯಕತೆಯ ಆಧಾರದ ಮೇಲೆ 60 ದಿನಗಳವರೆಗೆ ವಿಸ್ತರಿಸಬಹುದಾಗಿದೆ.
ದ್ವೇಷ ಭಾಷಣ ಮಾಡಿದರೆ 3 ವರ್ಷ ಜೈಲು ಶಿಕ್ಷೆ: ಈ ಪ್ರಸ್ತಾಪಿತ ಮಸೂದೆ ಪ್ರಕಾರ ದ್ವೇಷ ಭಾಷಣ ಮಾಡಿದರೆ 3 ವರ್ಷ ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ದ್ವೇಷ ಭಾಷಣ ಮೂಲಕ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾ ಗುಂಪಿಗೆ ಮೂರು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಅಂಶ ಇದೆ. 5 ಸಾವಿರ ರೂ. ದಂಡದ ಜತೆಗೆ ಶಿಕ್ಷೆ ವಿಧಿಸಬಹುದು ಎಂದು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಸಾಮಾಜಿಕ ಬಹಿಷ್ಕಾರ ತಡೆ ಮಸೂದೆಗೆ ಅಸ್ತು: ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅಂಥವರಿಗೆ 1 ಲಕ್ಷ ರೂ. ದಂಡ ಹಾಗೂ 3 ವರ್ಷದವರೆಗಿನ ಜೈಲು ಶಿಕ್ಷೆಗೆ ಗುರಿಪಡಿಸುವ ಕರ್ನಾಟಕ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ (ತಡೆ, ನಿಷೇಧ ಮತ್ತು ಪರಿಹಾರ) ಮಸೂದೆ-2025ಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಅಧಿವೇಶನದಲ್ಲಿ ಮಸೂದೆ ಮಂಡಿಸಲು ತೀರ್ಮಾನಿಸಲಾಗಿದೆ. ಈ ಮಸೂದೆ ಪ್ರಕಾರ ಸಾಮಾಜಿಕ ಬಹಿಷ್ಕರಿಸುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ, ಪಂಚಾಯ್ತಿ ನಡೆಸಿದವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುವುದು. ಬಹಿಷ್ಕಾರಕ್ಕೆ ಒತ್ತಡ ಹೇರಿ ಪರೋಕ್ಷವಾಗಿ ಕಾರಣರಾದವರು, ಬಹಿಷ್ಕಾರದ ಪರವಾಗಿ ಮತ ಹಾಕಿದವರು ಅಥವಾ ಚರ್ಚೆಯಲ್ಲಿ ಪಾಲ್ಗೊಂಡವರನ್ನೂ ಅಪರಾಧಿಗಳೆಂದು ನಿರ್ಧರಿಸಲಾಗುತ್ತದೆ.
ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಸಾಮಾಜಿಕ ಬಹಿಷ್ಕಾರದಂತಹ ನಿರ್ಧಾರ ತೆಗೆದುಕೊಳ್ಳಲು ನಡೆಸುವ ಸಭೆಗಳ ಕುರಿತು ಮಾಹಿತಿ ಬಂದರೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿಷೇಧಿಸುವ ಆದೇಶ ಹೊರಡಿಸಬಹುದು. ಗ್ರೂಪ್-ಎ ಅಧಿಕಾರಿಗಳನ್ನು ಸಾಮಾಜಿಕ ಬಹಿಷ್ಕಾರ ತಡೆ ಅಧಿಕಾರಿಗಳನ್ನಾಗಿ ನಿಯೋಜಿಸಬಹುದಾಗಿದೆ.
ಗ್ರಾಮ ಅಥವಾ ಸಮುದಾಯದಿಂದ ಹೊರ ಹಾಕುವುದು, ಧಾರ್ಮಿಕ, ಸಾರ್ವಜನಿಕ ಸ್ಥಳಗಳ ಬಳಕೆಗೆ ನಿರ್ಬಂಧ ವಿಧಿಸುವುದು, ಪೂಜಾ ಸ್ಥಳಗಳ ಪ್ರವೇಶಕ್ಕೆ ಅಡ್ಡಿ ಮಾಡುವುದು, ವ್ಯವಹಾರ ಅಥವಾ ಉದ್ಯೋಗ ತಿರಸ್ಕಾರ ಮಾಡುವುದು, ಶಾಲೆ, ಆಸ್ಪತ್ರೆ, ಸಮುದಾಯ ಭವನಗಳ ಪ್ರವೇಶಕ್ಕೆ ತಡೆಯೊಡ್ಡುವುದು, ಸೇವೆಗಳು, ಅವಕಾಶಗಳನ್ನು ನಿರಾಕರಿಸುವುದು, ಸಾಮಾಜಿಕ–ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ತಡೆಯೊಡ್ಡುವುದು, ಮದುವೆ, ಅಂತ್ಯಕ್ರಿಯೆಗಳಲ್ಲಿ ಭಾಗವಹಿಸುವುದಕ್ಕೆ ತಡೆಯೊಡ್ಡುವುದು, ವ್ಯಾಪಾರ, ಸಾಮಾಜಿಕ ಸಂಬಂಧಗಳಿಗೆ ತಡೆಯೊಡ್ಡುವುದು, ಮಕ್ಕಳನ್ನು ಒಟ್ಟಿಗೆ ಆಡಲು ಅಡ್ಡಿಪಡಿಸುವುದು, ಲಿಂಗತ್ವದ ಆಧಾರದ ಮೇಲೆ ಭೇದ ಮಾಡುವುದು, ಮಾನವ ಹಕ್ಕುಗಳನ್ನು ನಿರಾಕರಿಸುವುದು, ಬಟ್ಟೆ, ಭಾಷೆ, ಸಾಂಸ್ಕೃತಿಕ ಭೇದ ಎಸಗುವುದನ್ನು ಈ ಪ್ರಸ್ತಾಪಿತ ಮಸೂದೆಯಡಿ ನಿಷೇಧಿಸಲಾಗಿದೆ.
Laxmi News 24×7