ಬೆಂಗಳೂರು: ವ್ಯಕಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪ ಸಂಬಂಧ ಸಂಡೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಮಾಡಲು ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿ ಜಿಲ್ಲೆಯ ವಿ.ವಿವೇಕಾನಂದ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ನೀಡಿದೆ.
ಆರೋಪಿ ಯಾರೆಂಬ ಅಂಶದ ಮೇಲೆ ದೂರು ದಾಖಲಿಸುವುದು ಆಧರಿಸಿಲ್ಲ: ಅಲ್ಲದೆ, ದೂರು ದಾಖಲಿಸಿಲ್ಲ ಎಂಬುದು ಅರ್ಜಿದಾರರ ಅಹವಾಲು ಆಗಿದೆ. ಪ್ರಕರಣದಲ್ಲಿ ಪೊಲೀಸ್ ವಿರುದ್ಧ ದೇಶದ ಪ್ರಜೆ ದೂರು ನೀಡಿದ್ದಾರೆ ಎಂಬ ಕಾರಣಕ್ಕೆ ದೂರು ದಾಖಲಿಸಿಲ್ಲ. ಅರ್ಜಿದಾರರ ಮೇಲೆ ಇನ್ಸ್ಪೆಕ್ಟರ್ ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯನ್ನು ತಿಳಿಸುವ ಫೋಟೋಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿದೆ. ಆದರೂ ದೂರು ದಾಖಲಿಸದೇ ಅರ್ಜಿದಾರರ ಕುಟುಂಬವು ಠಾಣೆಗೆ ಸುತ್ತುವಂತೆ ಮಾಡಲಾಗಿದೆ. ಗಂಭೀರ ಸ್ವರೂಪದ ಅಪರಾಧ ಕೃತ್ಯ ಎಸಗಿರುವ ಯಾವುದೇ ವ್ಯಕ್ತಿಯ ವಿರುದ್ಧ ದೂರು ನೀಡಲು ನಾಗರಿಕರು ಪೊಲೀಸ್ ಠಾಣೆಗೆ ಹೋದರೆ, ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಅದೇ ಪೊಲೀಸ್ ಠಾಣೆಯ ಅಧಿಕಾರಿಯಾಗಿದ್ದರೂ ಸಹ ದೂರು ದಾಖಲಿಸಲು ನಿರಾಕರಿಸುವಂತಿಲ್ಲ. ಅಲ್ಲದೇ, ಆರೋಪಿ ಯಾರು ಎಂಬ ಅಂಶದ ಮೇಲೆ ದೂರು ದಾಖಲಿಸುವುದು ಆಧರಿಸಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
Laxmi News 24×7