ಮಂಗಳೂರು: ಶಾಲೆಗಳಲ್ಲಿ ಒಂದೋ ಅಥವಾ ಎರಡು ಜೋಡಿ ಅವಳಿ ಜವಳಿ ಮಕ್ಕಳು ಇರುವುದು ಸಾಮಾನ್ಯ. ಆದರೆ ಮಂಗಳೂರಿನ ಶಾಲೆಯೊಂದರಲ್ಲಿ ಒಂದಲ್ಲ, ಎರಡಲ್ಲ, ಏಳು ಜೋಡಿ ಅವಳಿ ಜವಳಿ ಮಕ್ಕಳಿದ್ದಾರೆ. ಇವರು ಶಾಲೆಯ ಇತರ ವಿದ್ಯಾರ್ಥಿಗಳಿಗೆ, ಶಿಕ್ಷಕರ ಆಕರ್ಷಣೆಗೆ ಪಾತ್ರರಾಗಿದ್ದಾರೆ.
ಈ ಏಳು ಅವಳಿ ಜವಳಿ ವಿದ್ಯಾರ್ಥಿಗಳಿರುವುದು ಮಂಗಳೂರಿನ ಹೊರವಲಯದ ವಾಮಂಜೂರಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್ನಲ್ಲಿ. ಈ ಶಾಲೆಯ ಒಂದನೇ ತರಗತಿಯಲ್ಲಿ ಒಂದು ಜೋಡಿ, ಎರಡನೇ ತರಗತಿಯಲ್ಲಿ ಎರಡು ಜೋಡಿ, ಮೂರನೇ ತರಗತಿಯಲ್ಲಿ ಒಂದು ಜೋಡಿ, 5 ನೇ ತರಗತಿಯಲ್ಲಿ ಎರಡು ಜೋಡಿ, ಆರನೇ ತರಗತಿಯಲ್ಲಿ ಒಂದು ಜೋಡಿ ಅವಳಿ ಜವಳಿ ಮಕ್ಕಳಿದ್ದಾರೆ. ಇದರಲ್ಲಿ ಒಂದು ಜೋಡಿ ಹೊರ ಜಿಲ್ಲೆಯ ವಿದ್ಯಾರ್ಥಿಗಳಾಗಿದ್ದರೆ, ಉಳಿದ ಆರು ಜೋಡಿ ಸ್ಥಳೀಯ ವಿದ್ಯಾರ್ಥಿಗಳಾಗಿದ್ದಾರೆ.
ಒಂದನೇ ತರಗತಿಯ ಗಂಗಾ – ಜಮುನಾ, ಎರಡನೇ ತರಗತಿಯ ಸಾಕ್ಷಿ – ರಾಜೇಶ್ವರಿ, ದಿಶಾ – ದಿತ್ಯ, ಮೂರನೇ ತರಗತಿಯ ಝುವ – ಝಿಯಾಮ್, ಐದನೇ ತರಗತಿಯ ನಿಧಿ – ನಿಶಾ, ನಿಶಾನ್ – ನಿಧಿಶ, ಆರನೇ ತರಗತಿಯ ಪ್ರಣಾಮ್- ಪ್ರಥಮ್ ಅವಳಿ ಜವಳಿ ಮಕ್ಕಳಾಗಿದ್ದಾರೆ. ಇವರಲ್ಲಿ ಝುವ ಹುಡುಗಿ, ಝಿಯಾಮ್ ಹುಡುಗ, ನಿಶಾನ್ ಹುಡುಗ ಮತ್ತು ನಿದಿಶಾ ಹುಡುಗಿ. ಉಳಿದವರು ಒಂದೇ ಲಿಂಗಕ್ಕೆ ಸೇರಿದ ಅವಳಿ ಜವಳಿ ಮಕ್ಕಳು.
ಈ ಅವಳಿ ಜವಳಿ ಮಕ್ಕಳು ಶಿಕ್ಷಕರು ಹಾಗೂ ಉಳಿದ ವಿದ್ಯಾರ್ಥಿಗಳಲ್ಲಿ ಕನ್ಫ್ಯೂಶನ್ಗೆ ಕಾರಣವಾಗುತ್ತಿದ್ದಾರೆ. ಒಬ್ಬರನ್ನು ಕರೆಯಲು ಇನ್ನೊಬ್ಬರ ಹೆಸರನ್ನು ಬಳಸುತ್ತಿದ್ದಾರೆ. ಕೆಲವೊಂದು ಶಿಕ್ಷಕರು ಇಬ್ಬರ ಹೆಸರನ್ನು ಕರೆದು ಗೊಂದಲ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಅವಳಿ ಜವಳಿ ವಿದ್ಯಾರ್ಥಿಗಳು ಶಿಕ್ಷಕರ, ವಿದ್ಯಾರ್ಥಿಗಳ ಆಕರ್ಷಣೆಗೆ ಪಾತ್ರರಾಗಿದ್ದಾರೆ.
![]()
ಈ ಬಗ್ಗೆ ಮಾತನಾಡುವ ಶಿಕ್ಷಕಿ ಗ್ರೆಟ್ಟಾ ಕುಟಿನ್ಹಾ ಅವರು, ನಮ್ಮಲ್ಲಿ ಏಳು ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳಿದ್ದಾರೆ. ಇವರನ್ನು ಗುರುತಿಸಲು ಕಷ್ಟವಾಗುತ್ತದೆ. ಕೆಲವೊಮ್ಮೆ ಗೊಂದಲ ತಪ್ಪಿಸಲು ಇಬ್ಬರ ಹೆಸರನ್ನು ಒಟ್ಟಿಗೆ ಕರೆಯುತ್ತೇವೆ ಎಂದು ಹೇಳುತ್ತಾರೆ.
ಅವಳಿ ವಿದ್ಯಾರ್ಥಿ ಪ್ರಥಮ್ ಮಾತನಾಡಿ, ನಮ್ಮ ಗೆಳೆಯರು ನಮ್ಮನ್ನು ಗುರುತಿಸುತ್ತಾರೆ. ನನ್ನನ್ನು ಪ್ರಣಾಮ್ ಆಗಿದ್ದರೂ ಕೆಲವರು ನನ್ನನ್ನು ಪ್ರಥಮ್ ಎಂದು ಕರೆಯುತ್ತಾರೆ ಎನ್ನುತ್ತಾನೆ.
ಅವಳಿ ವಿದ್ಯಾರ್ಥಿ ನಿಶಾನ್ ಮಾತನಾಡಿ, ನಮ್ಮನ್ನು ಗುರುತಿಸುತ್ತಾರೆ. ಆದರೆ, ನಾವು ಇಬ್ಬರು ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಎನ್ನುತ್ತಾನೆ.
ವಿದ್ಯಾರ್ಥಿನಿ ಆಯಿಷಾ ರಿದಾ ಮಾತನಾಡಿ, ನನ್ನ ತರಗತಿಯಲ್ಲಿ ಅವಳಿ ಜವಳಿ ಇದ್ದಾರೆ. ಅವರನ್ನು ಗುರುತಿಸುವಲ್ಲಿ ಕನ್ಫ್ಯೂಸ್ ಆಗುತ್ತದೆ. ಒಬ್ಬ ತಪ್ಪು ಮಾಡಿದರೆ, ಮತ್ತೊಬ್ಬನಿಗೆ ಬೈಗುಳ ಸಿಗುತ್ತದೆ. ನಮಗೆ ಅವರ ಹೆಸರು ಕನ್ಫ್ಯೂಸ್ ಆಗುತ್ತದೆ ಎನ್ನುತ್ತಾರೆ.
ಇರುವೈಲ್ ಶಾಲೆಯ ವಿದ್ಯಾಭೋಧಿನಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರಘು ಸಾಲ್ಯಾನ್ ಮಾತನಾಡಿ, ನಮ್ಮ ಶಾಲೆಯಲ್ಲಿ ಏಳು ಅವಳಿ ಜವಳಿ ಮಕ್ಕಳಿರುವುದು ಖುಷಿ. ನಮಗೆ ಇವರನ್ನು ಗುರುತಿಸುವುದು ಕನ್ಫ್ಯೂಸ್ ಆಗುತ್ತದೆ. ಇವರಲ್ಲಿ ಯಾರಾದರೂ ಒಬ್ಬರು ಉಪದ್ರ ಮಾಡಿದರೆ ಮತ್ತೊಬ್ಬರಿಗೆ ಬೈಗುಳ ಸಿಗುತ್ತದೆ. ಏಳು ಜೋಡಿ ಮಕ್ಕಳಿರುವುದು ಖುಷಿ ತಂದಿದೆ. ಅವರು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ ಎಂದು ತಿಳಿಸಿದರು.
Laxmi News 24×7