ಧಾರವಾಡ : ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಕ್ಷಮತಾ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ ಖ್ಯಾತ ಹಾಸ್ಯ ನಟ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳು, ಸಾಹಿತಿಗಳು ಹಾಗೂ ಗಣ್ಯರು ಅನಿಸಿಕೆ ಹಂಚಿಕೊಂಡರು.
ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡಿ, ಯಶವಂತ ಸರದೇಶಪಾಂಡೆ ಪ್ರಯೋಗಶೀಲ ವ್ಯಕ್ತಿ. ಕೇವಲ ರಂಗಭೂಮಿಯಷ್ಟೇ ಅಲ್ಲ, ಸಿನೆಮಾ ಕ್ಷೇತ್ರದಲ್ಲಿಯೂ ಪ್ರಯೋಗಗಳನ್ನು ಮಾಡಿ ಯಶ ಕಂಡರು. ತಮಗನಿಸಿದ್ದನ್ನು ಮಾಡುವುದರಲ್ಲಿ ಹಿಂದೆಮುಂದೆ ನೋಡುತ್ತಿರಲಿಲ್ಲ. ಲಾಭವಾಗಲಿ, ನಷ್ಟವಾಗಲಿ ಪ್ರಯೋಗ ಮಾಡುವ ಜಾಯಮಾನ ಅವರದಾಗಿತ್ತು. ತಮ್ಮ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಕಲೆ ಅವರಿಗೆ ಕರಗತವಾಗಿತ್ತು.
ಅವರೊಬ್ಬ ವೈವಿಧ್ಯಮಯ ಕಲಾವಿದ ಎಂದರು. ಜತೆಗೆ ಹಿರಿಯ ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಕನ್ನಡ ಸಿನೆಮಾಗಳಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನು ಗೇಲಿ ಮಾಡುವುದಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಅಯೋಗ್ಯ ರಾಜಕಾರಣಿ, ಪೊಲೀಸ್ ಅಧಿಕಾರಿಯ ನಗೆಗೇಡಿ ಭಾಷೆಯಾಗಿ ಇಲ್ಲಿನ ಭಾಷೆಯನ್ನು ಬಳಸಿಕೊಳ್ಳುತ್ತಿದ್ದರು. ಇದರಿಂದ ಮನನೊಂದ ಯಶವಂತ ಇಲ್ಲಿನ ಭಾಷೆಯ ಸೊಗಡನ್ನು ಇಡೀ ರಾಜ್ಯಕ್ಕೆ ಪಸರಿಸಬೇಕೆಂಬ ಉದ್ದೇಶದಿಂದ ನಾಟಕಗಳು, ಸಿನೆಮಾಗಳಲ್ಲಿ ಉತ್ತರ ಕರ್ನಾಟಕ ಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡರು. ಅದರಲ್ಲಿ ಅವರು ಯಶಸ್ವಿಯೂ ಆದರು ಎಂದು ತಿಳಿಸಿದರು.
ಹಿರಿಯ ಶಿಕ್ಷಕ ಮೋಹನ ಸಿದ್ಧಾಂತಿ ಮಾತನಾಡಿ, ಯಶವಂತ ಆದಿರಂಗ ನಾಟಕಗೃಹ ನಿರ್ಮಿಸುವಾಗ ಬಹಳ ಕಷ್ಟಪಟ್ಟ. ಸಾಕಷ್ಟು ತೊಂದರೆಗಳು ಎದುರಾದರೂ ಅದನ್ನು ಪೂರ್ಣಗೊಳಿಸಿದ. ಆದರೆ ಈಗ ಆದಿರಂಗ ಅನಾಥವಾಗಿದೆ ಎಂದರು.
ರಂಗಕರ್ಮಿ ಅರವಿಂದ ಕುಲಕರ್ಣಿ
ಮಾತನಾಡಿ, ಯಶವಂತ ಸರದೇಶಪಾಂಡೆ ಶ್ರೇಷ್ಠ ನಟ. ಅವರ ಹೆಸರಿನಲ್ಲಿ ಪ್ರತಿ ವರ್ಷ ರಂಗೋತ್ಸವ ಆಯೋಜನೆ ಕುರಿತು ನಿರ್ಧರಿಸಬೇಕು ಎಂದು ತಿಳಿಸಿದರು. ವಿಶ್ವೇಶ್ವರಿ ಹಿರೇಮಠ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿದರು. ಗೋವಿಂದ ಜೋಶಿ, ಸಮೀರ ಜೋಶಿ ವೇದಿಕೆ ಮೇಲಿದ್ದರು. ರವಿ ಕುಲಕರ್ಣಿ ನಿರೂಪಿಸಿದರು.
Laxmi News 24×7