ಬೆಂಗಳೂರು: ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳೆಯಿಂದಾಗಿ ನದಿಗಳ ಪ್ರವಾಹ ಉಂಟಾಗಿ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ ನಿರ್ಮಾಣಕ್ಕಾಗಿ 1545.23 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಕೇಂದ್ರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ (ಎನ್ಡಿಆರ್ಎಫ್) ಪತ್ರ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿವೆ. ಬೆಳೆ ನಾಶವಲ್ಲದೇ ಹಲವು ಜಿಲ್ಲೆಗಳಲ್ಲಿ ರಸ್ತೆಗಳು ಬಿರುಕು ಮೂಡಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಚೆಕ್ ಡ್ಯಾಂ ಹಾಗೂ ಮನೆಗಳು ಇನ್ನಿತರ ಮೂಲಸೌಕರ್ಯಗಳಿಗೆ ಅಡಚಣೆಯಾಗಿದೆ. ಸಾರ್ವಜನಿಕ ಆಸ್ತಿಗಳು ಸೇರಿದಂತೆ ಒಟ್ಟು ಸುಮಾರು 5 ಕೋಟಿಗಿಂತ ಹೆಚ್ಚು ನಷ್ಟವಾಗಿದೆ. ಹೀಗಾಗಿ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ 1545.23 ಕೋಟಿ ಅನುದಾನ ಬಿಡುಗಡೆ ಕೋರಿ ಪತ್ರ ಬರೆಯಲಾಗುವುದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಮಳೆಯಿಂದಾಗಿ ಹಾನಿಗೊಳಗಾದ ಮೂಲಸೌಕರ್ಯ ಪುನರ್ ನಿರ್ಮಾಣಕ್ಕಾಗಿ ಅನುದಾನ ಕೋರಿ ಇದೇ ಮೊದಲ ಬಾರಿಗೆ ಎನ್ಡಿಆರ್ಎಫ್ಗೆ ಪತ್ರ ಬರೆಯಲಾಗುತ್ತಿದೆ. ಈ ವರ್ಷ ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಿಗೆ ಮೂಲಸೌಕರ್ಯ ಮರು ನಿರ್ಮಾಣಕ್ಕಾಗಿ ಕೇಂದ್ರ ಅನುದಾನ ನೀಡಿದೆ. ಇದೇ ಮೊದಲ ಬಾರಿಗೆ ಸರ್ಕಾರವು ಪತ್ರ ಬರೆಯುತ್ತಿದೆ ಎಂದರು.
ಮನವಿ ಪತ್ರ ಬೆಳೆ ಹಾನಿಗೆ ಸಂಬಂಧಿಸಿಲ್ಲ. ರಾಜ್ಯದ ಐದಾರು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಸಂಬಂಧ ಜಂಟಿ ಸರ್ವೇಗಳು ನಡೆದಿದ್ದು, ಇನ್ನೆರಡು ದಿನಗಳಲ್ಲಿ ವರದಿ ಬಂದ ಬಳಿಕ ಫಲಾನುಭವಿಗಳಿಗೆ ನಿಯಮಾನುಸಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬೆಂಗಳೂರು ನಗರದ ಅಭಿವೃದ್ಧಿಗೆ 2,296 ಕೋಟಿ ಅನುದಾನ: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 5 ಬೆಂಗಳೂರು ನಗರ ಪಾಲಿಕೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು 1,055 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಹಾಗೂ ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯಡಿ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿನ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾಂಬರೀಕರಣಕ್ಕಾಗಿ 1241.57 ಕೋಟಿ ಸೇರಿದಂತೆ ಒಟ್ಟು 2,296 ಕೋಟಿ ಕ್ರಿಯಾ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಮಸೂದೆ ಜಾರಿ ಸಿದ್ದತೆ: ಪರಿಶಿಷ್ಠ ಜಾತಿಯ ಒಳ ಮೀಸಲಾತಿ ಅನುಷ್ಠಾನಕ್ಕಾಗಿ ಕಾನೂನಿನ ಬಲ ನೀಡಲು ಮಸೂದೆ ತರಲು ಮುಂದಾಗಿರುವ ರಾಜ್ಯ ಸರ್ಕಾರವು ಕರಡು ವಿಧೇಯಕ ಸಿದ್ದಪಡಿಸಿದ್ದು, ಸಾಧಕ-ಭಾದಕಗಳನ್ನು ಚರ್ಚಿಸಿ ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಿದ್ದತೆ ನಡೆಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ವಿಧಾನಸೌಧದಲ್ಲಿ ಒಳಮೀಸಲಾತಿ ಕುರಿತಂತೆ ಸಭೆಯಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆದಿತ್ತು. ಮೀಸಲಾತಿ ಅನುಷ್ಠಾನ ಹಾಗೂ ಮುಂದೆ ಎದುರಾಗುವ ತೊಡಕುಗಳ ನಿವಾರಣೆಗಾಗಿ ಹೊಸದಾಗಿ ಕಾಯ್ದೆ ತರಲು ಸಭೆಯಲ್ಲಿ ನಿರ್ಧರಿಸಿತ್ತು. ಸಭೆ ಬಳಿಕ ಈ ಬಗ್ಗೆ ಚರ್ಚಿಸಲು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಇರದಿದ್ದ ಕಾರಣ ಅವರೊಂದಿಗೆ ಸಮಾಲೋಚಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇನ್ನೆರಡು ದಿನಗಳಲ್ಲಿ ಅವರೊಂದಿಗೆ ಚರ್ಚೆ ನಡೆಸಿ ಕರಡು ವಿಧೇಯಕ ಅಂತಿಮಗೊಳಿಸಿ ಮುಂದಿನ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಮಂಡಿಸಲು ನಿರ್ಧರಿಸುವುದಾಗಿ ಕಾನೂನು ಸಂಸದೀಯ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಅಧಿವೇಶನದ ದಿನಾಂಕ ನಿಗದಿಯಾಗಿಲ್ಲ: ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನ ಕುರಿತಂತೆ ದಿನಾಂಕ ನಿಗಪಡಿಸಿಲ್ಲ. ಈ ಬಗ್ಗೆ ಕ್ಯಾಬಿನೆಟ್ನಲ್ಲಿ ಈ ವಿಷಯ ಚರ್ಚೆಯಾಗಿಲ್ಲ. ಡಿ. 8ರಂದು ಅಧಿವೇಶನ ಆರಂಭ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದರು.
 Laxmi News 24×7
Laxmi News 24×7
				 
		 
						
					