ಕಾಪು: ತುಳುನಾಡು ಹಲವಾರು ಆಚರಣೆ, ಸಂಸ್ಕೃತಿ ಮತ್ತು ಸಂಸ್ಕಾರಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಹಬ್ಬ, ಆಚರಣೆಗಳಿಗೂ ಅದರದ್ದೇ ಆದ ಮಹತ್ವವಿದೆ. ತುಳುವರ ಹಲವಾರು ಜಾನಪದ ಆಚರಣೆಗಳಲ್ಲಿ ದೀಪಾವಳಿ ಪ್ರಯುಕ್ತ ನರಕ ಚತುರ್ದಶಿಯಂದು ನಡೆಸುವ ಮುಳ್ಳಮುಟ್ಟೆ ಆಚರಣೆಯೂ ಒಂದು.
ಕಾಪು ತಾಲೂಕಿನ ವಿವಿಧೆಡೆ ದೀಪಾವಳಿ ಪ್ರಯುಕ್ತ ಮುಂಜಾನೆ ಮುಳ್ಳಮುಟ್ಟೆ ಸಂಭ್ರಮಾಚರಣೆ ನಡೆಯುತ್ತದೆ. ವಿಶೇಷವಾಗಿ ಕೊಪ್ಪಲಂಗಡಿ, ಮಲ್ಲಾರು, ಮಜೂರು, ಉಳಿಯಾರು, ಕರಂದಾಡಿ, ಇನ್ನಂಜೆ, ಕಲ್ಯಾಲು, ಪಾಂಗಾಳ, ಕಟಪಾಡಿ, ಮಣಿಪುರ, ಪಡುಬೆಳ್ಳೆ, ಬೆಳಪು ಪರಿಸರದಲ್ಲಿ ವಿಶೇಷವಾಗಿ ಈ ಮುಳ್ಳಮುಟ್ಟೆ ಆಚರಣೆ ನಡೆಯುತ್ತದೆ. ಅದರಲ್ಲೂ ವಿಶೇಷ ಎಂಬಂತೆ ಕೊಪ್ಪಲಂಗಡಿ, ಇನ್ನಂಜೆಯಲ್ಲಿ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದ ಪ್ರಯುಕ್ತ ಬಂಟ ಕೋಲ ನಡೆಯುತ್ತದೆ.
ಕೊಪ್ಪಲಂಗಡಿ, ಇನ್ನಂಜೆ ಪರಿಸರದಲ್ಲಿ ಮುಳ್ಳಮುಟ್ಟೆಗೆ ಪೂರ್ವಭಾವಿಯಾಗಿ ಬಂಟ ಕೋಲ ನಡೆಯುವ ಸಂಪ್ರದಾಯವಿದೆ. ಬಂಟ ಕೋಲದ ವೇಷಧಾರಿಗಳು ಊರಿನ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ತೆರಳಿ, ಕಾಣಿಕೆ ಸಮರ್ಪಿಸಿ ಊರಿನ ಮಾರಿ ಓಡಿಸಲು ಶಕ್ತಿ ನೀಡಿ ಎಂದು ದೇವರಲ್ಲಿ ಪ್ರಾರ್ಥಿಸುವ ಸಂಪ್ರಧಾಯವಿದೆ. ಬಂಟ ಕೋಲದ ಜೊತೆಗೆ ಯುವಕರು ಕೂಡಾ ವಾದ್ಯ, ತಾಸೆ, ಡೋಲಿನ ವಾದನಕ್ಕೆ ತೂಟೆಯನ್ನು ಹಿಡಿದುಕೊಂಡು ನೃತ್ಯ ಮಾಡುತ್ತಾರೆ.
ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಕೃಷಿಗೆ ಪೂರಕವಾಗಿ ನಡೆಸುತ್ತಿದ್ದ ಮುಳ್ಳಮುಟ್ಟೆ ಕಾರ್ಯಕ್ರಮಕ್ಕೆ ಇಂದು ಧಾರ್ಮಿಕ ಸ್ಪರ್ಶವೂ ಇದೆ. ಇದು ನರಕಾಸುರ ವಧೆಯನ್ನು ನೆನಪಿಸುವಂತೆ ಮಾಡುತ್ತದೆ. ನರಕಾಸುರ ವಧೆಯ ಕಲ್ಪನೆಯೊಂದಿಗೆ ಊರಿಗೆ ಬಂದಿರುವ ದುಷ್ಟಾರಿಷ್ಟಗಳು ದೂರವಾಗಲಿ ಎಂಬ ಉದ್ದೇಶದಿಂದ ಮುಳ್ಳು ಮುಟ್ಟೆ ದಹಿಸಲಾಗುತ್ತದೆ.